
ಬೆಂಗಳೂರು: ‘ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಮಗಾರ–ಚಮ್ಮಾರ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ಕಲ್ಪಿಸಿ, ಸರ್ಕಾರಿ ಸೌಲಭ್ಯ ಒದಗಿಸಬೇಕು’ ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಆಗ್ರಹಿಸಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಭೀಮರಾವ ಪವಾರ, ‘ಸಮುದಾಯದವರು 10 ಲಕ್ಷ ಜನರಿದ್ದಾರೆ. ಒಳಮೀಸಲಾತಿ ವೇಳೆ ಸಮುದಾಯವನ್ನು ಪ್ರತ್ಯೇಕವಾಗಿ ಪರಿಗಣಿಸದ ಪರಿಣಾಮ ಅನ್ಯಾಯವಾಗಿದೆ. ಶೇ 6ರ ಒಳಮೀಸಲಾತಿಯಲ್ಲಿ ಚರ್ಮಕಾರರ ಪಾಲು ಎಷ್ಟು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಒಳಮೀಸಲಾತಿಯ ಪಾಲನ್ನು ನಿಗದಿಪಡಿಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
‘ಶಿವಶರಣ ಹರಳಯ್ಯ ಅವರ ಹೆಸರಿನಲ್ಲಿ ಅನ್ಯ ಜಾತಿಯವರು ಸಮುದಾಯದ ಸೌಲಭ್ಯ ಪಡೆಯುತ್ತಿದ್ದಾರೆ. ಅವರ ಹೆಸರಿನಲ್ಲಿ ಮಂಜೂರಾಗುವ ಎಲ್ಲ ಸೌಲಭ್ಯಗಳು ಚಮ್ಮಾರ ಸಮುದಾಯಕ್ಕೆ ತಲುಪುವಂತೆ ಎಚ್ಚರವಹಿಸಬೇಕು’ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಮೋಹನ ಉಳ್ಳಿಕಾಶಿ, ಉಪಾಧ್ಯಕ್ಷ ಮಹದೇವ ಪೋಳ ಮತ್ತು ಪ್ರಧಾನ ಕಾರ್ಯದರ್ಶಿ ಮನೋಹರ ಮಂದೋಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.