ADVERTISEMENT

ಕ್ರಿಕೆಟ್‌ ಬೆಟ್ಟಿಂಗ್: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 21:19 IST
Last Updated 30 ಆಗಸ್ಟ್ 2022, 21:19 IST

ಬೆಂಗಳೂರು: ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಭಾರತ–ಪಾಕಿಸ್ತಾನ ಪಂದ್ಯ ನಡೆದಾಗ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ವಿನಾಯಕ ಲೇಔಟ್‌ನ ಯೋಗೇಶ್‌ ಎಂಬಾತನ್ನು ಬಂಧಿಸಿ, ₹ 1.5 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂಡಗಳ ಸೋಲು ಹಾಗೂ ಗೆಲುವಿನ ಬಗ್ಗೆ ಪಂಟರ್‌ಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು, ಜೂಜಾಟ ಆಡಿ ಗೆದ್ದವರಿಗೆ ಹಣ ನೀಡುತ್ತಿದ್ದ. ಸೋತವರಿಂದ ಹಣ ಸಂಗ್ರಹಿಸಿ ಗೆದ್ದವರಿಗೆ ಹಣ ವಿತರಿಸುವಾಗ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕುದುರೆ ರೇಸ್‌ ಬೆಟ್ಟಿಂಗ್‌: ಆರೋಪಿ ಬಂಧನ

ADVERTISEMENT

ಬೆಂಗಳೂರು: ಕುದುರೆ ರೇಸ್‌ನ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಕಾಮಾಕ್ಷಿಪಾಳ್ಯದ ನಿವಾಸಿ ವೆಂಕಟೇಶ್‌ (50) ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತನಿಂದ ₹ 22 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

‘ಆರೋಪಿಯು ಪಶ್ಚಿಮ ಕಾರ್ಡ್‌ ರಸ್ತೆಯ ಜಂಕ್ಷನ್‌ನ ಸಂತೋಷ್ ಬಾರ್ ಎದುರು ಹೈದರಾಬಾದ್‌ ಕುದುರೆ ರೇಸ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಕುದುರೆ ರೇಸ್‌ನ ಬೆಟ್ಟಿಂಗ್‌ನಲ್ಲಿ ತೊಡಗಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡುಯೆಟ್‌ ಪಬ್‌ ಮಾಲೀಕರ ವಿರುದ್ಧ ಎಫ್‌ಐಆರ್‌
ಬೆಂಗಳೂರು:
ಹೊರರಾಜ್ಯದ ಮಹಿಳೆಯರನ್ನು ಪಬ್‌ ಕೆಲಸಕ್ಕೆ ನೇಮಿಸಿಕೊಂಡು ಅಸಭ್ಯ ಉಡುಪು ತೊಡಿಸಿ ನೃತ್ಯ ಮಾಡಿಸುತ್ತಿದ್ದ ಆರ್‌.ಎಚ್‌.ಪಿ ರಸ್ತೆಯ ಡುಯೆಟ್‌ ಪಬ್‌ ಮಾಲೀಕರು, ವ್ಯಸ್ಥಾಪಕರು ಹಾಗೂ ಸಿಬ್ಬಂದಿ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಾರ್‌ ಗರ್ಲ್‌ ಆಗಿ ಹೊರರಾಜ್ಯದ ಮಹಿಳೆಯರನ್ನು ನೇಮಿಸಿಕೊಂಡು ಗ್ರಾಹಕರನ್ನು ಸೆಳೆಯಲು ನೃತ್ಯ ಮಾಡಿಸುತ್ತಿದ್ದರು. ಈ ಸಂಬಂಧ ಭೀಮಸೇನ ಫಾಟಗೆ ಅವರು ದೂರು ನೀಡಿದ್ದರು. ರಾತ್ರಿ ವೇಳೆ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಹುಕ್ಕಾ ಬಾರ್‌ಗಳ ಮೇಲೂ ದಾಳಿ ನಡೆಸಿದ್ದಾರೆ.

‘ಹುಕ್ಕಾ ಪರಿಕರ, ಹುಕ್ಕಾ ಫ್ಲೇವರ್‌ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಅಪ್ರಾಪ್ತ ವಯಸ್ಸಿನವರು ಈ ಬಾರ್‌ನಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.