
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ತಂಡಗಳ ಪರ ಆಡಲು ಅವಕಾಶ ಕೊಡಿಸುವ ಆಮಿಷವೊಡ್ಡಿ ₹ 12.23 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರಾಜಾಜಿನಗರದ ಶ್ಯಾಮ್‌ಪ್ರಸಾದ್ ಅವರು ವಂಚನೆ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ನೀಡಿರುವ ನಿರ್ದೇಶನ ಆಧರಿಸಿ, ಕ್ರಿಕೆಟ್ ತರಬೇತುದಾರ ಗೌರವ್ ಧಿಮಾನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರರ ಮಗ, ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿರುವ ಸಂಸ್ಥೆಯೊಂದರಲ್ಲಿ ತರಬೇತಿಗೆ ಸೇರಿದ್ದರು. ಅಲ್ಲಿಯ ತರಬೇತುದಾರ ಗೌರವ್ ಧಿಮಾನ್, ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ ₹ 12.23 ಲಕ್ಷ ಪಡೆದಿದ್ದರು. ಯಾವುದೇ ಅವಕಾಶ ಕೊಡಿಸಿರಲಿಲ್ಲ. ಹಣ ವಾಪಸು ಕೇಳಿದಾಗ ಜೀವ ಬೆದರಿಕೆಯೊಡ್ಡಿದ್ದರು ಎಂಬುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.