ADVERTISEMENT

ಮೇಲ್ಸೇತುವೆಯಿಂದ ಬಿದ್ದ ಲಾರಿ; ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:15 IST
Last Updated 14 ಏಪ್ರಿಲ್ 2019, 20:15 IST
ಮೇಲ್ಸೇತುವೆಯಿಂದ ಬಿದ್ದ ಲಾರಿ (ಒಳಚಿತ್ರದಲ್ಲಿ ಶ್ರೀನಿವಾಸ್)
ಮೇಲ್ಸೇತುವೆಯಿಂದ ಬಿದ್ದ ಲಾರಿ (ಒಳಚಿತ್ರದಲ್ಲಿ ಶ್ರೀನಿವಾಸ್)   

ಬೆಂಗಳೂರು: ಅಣಬೆ ಸಾಗಿಸುತ್ತಿದ್ದ ಲಾರಿ ಯಶವಂತಪುರ ಮೇಲ್ಸೇತುವೆಯಿಂದ ರಸ್ತೆಗೆ ಬಿದ್ದು ಅದರ ಚಾಲಕ ಶ್ರೀನಿವಾಸ್ (24) ಹಾಗೂ ಕ್ಲೀನರ್ ಕೆಂಚೇಗೌಡ (25) ಮೃತಪಟ್ಟಿದ್ದಾರೆ.

ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ.

ಇಬ್ಬರೂ ಉಲ್ಲಾಳ ನಿವಾಸಿಗಳಾಗಿದ್ದು, ಕೆ.ಆರ್.ಮಾರುಕಟ್ಟೆ ಬಳಿ ಇರುವ ಅಣಬೆ ರಫ್ತು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯ ಲಾರಿಯಲ್ಲೇ ಪುಣೆಯಿಂದ ಅಣಬೆ ‌ತೆಗೆದುಕೊಂಡು ನಗರಕ್ಕೆ ಮರಳುತ್ತಿದ್ದರು ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದ್ದಾರೆ.

ADVERTISEMENT

ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಶ್ರೀನಿವಾಸ್, ಮೇಲ್ಸೇತುವೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡರು. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಲಾರಿ, ತಡೆಗೋಡೆಗೆ ಅಪ್ಪಳಿಸಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿತು. ಅಲ್ಲೇ ಇದ್ದ ಆಟೊ ಚಾಲಕರು ಹಾಗೂ ಇತರೆ ವಾಹನಗಳ ಸವಾರರು ರಕ್ಷಣೆಗೆ ಧಾವಿಸಿದರು. ಆದರೆ, ದೇಹ ಅಪ್ಪಚ್ಚಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.

ಗಂಭೀರ ಗಾಯಗೊಂಡಿದ್ದ ಕೆಂಚೇಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ, ಮಧ್ಯಾಹ್ನ 3.30ರ ಸುಮಾರಿಗೆ ಅವರೂ ಕೊನೆಯುಸಿರೆಳೆದರು. ‘ಸಾಮಾನ್ಯವಾಗಿ 7 ಗಂಟೆ ನಂತರ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಆ ವೇಳೆ ಅನಾಹುತ ಸಂಭವಿಸಿದ್ದರೆ, ಹೆಚ್ಚಿನ ಜೀವ ಹಾನಿಯಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

2017ರ ನ.17ರಂದು ಇದೇ ಸ್ಥಳದಲ್ಲಿ ಕೋಳಿ ಸಾಗಣೆ ಕ್ಯಾಂಟರ್ ಬಿದ್ದಿತ್ತು. 4,500 ಕೋಳಿಗಳು ಸತ್ತು, ಚಾಲಕ ಹಾಗೂ ಇಬ್ಬರು ಕ್ಲೀನರ್‌ಗಳು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.