ADVERTISEMENT

ಸುಳ್ಳು ಮೊಕದ್ದಮೆ: ವಿಧಾನಸೌಧ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 19:55 IST
Last Updated 25 ಫೆಬ್ರುವರಿ 2022, 19:55 IST

ಬೆಂಗಳೂರು: ‘ವಕೀಲ ಜಗದೀಶ್ ಕೆ.ಎನ್. ಮಹಾದೇವ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಆರೋಪಿಸಿ ನಗರದ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದಲ್ಲಿ ಸೇರಿದ್ದ ವಕೀಲರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಮೆರವಣಿಗೆ ಮೂಲಕ ಸಾಗಿ, ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ತೀರ್ಮಾನಿಸಿದ್ದರು. ಆದರೆ, ಅವರನ್ನು ವಿಧಾನಸೌಧ ಎದುರೇ ಪೊಲೀಸರು ತಡೆದರು. ಪ್ರತಿಭಟನಕಾರರು ಸ್ಥಳದಲ್ಲೇ ಸಭೆ ನಡೆಸಿದರು.

ADVERTISEMENT

‘ಐಪಿಎಸ್ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ವಿರುದ್ಧ ವಕೀಲ ಜಗದೀಶ್ ಹೋರಾಡುತ್ತಿದ್ದರು. ನ್ಯಾಯಾಲಯದಲ್ಲಿ ನಡೆದ ಘಟನೆಯನ್ನೇ ಅಸ್ತ್ರ ಮಾಡಿಕೊಂಡ ಪೊಲೀಸರು, ಜಗದೀಶ್ ವಿರುದ್ಧ ಕೊಲೆ ಯತ್ನ (ಐಪಿಸಿ 307) ಪ್ರಕರಣ ದಾಖಲಿಸಿದ್ದಾರೆ. ಇದು ಸುಳ್ಳು ಪ್ರಕರಣ’ ಎಂದು ಪ್ರತಿಭಟನಕಾರರು ದೂರಿದರು.

‘ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು. ಈ ಷಡ್ಯಂತ್ರದ ಹಿಂದಿರುವವರನ್ನು ಪತ್ತೆ ಮಾಡಿ, ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದೂ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.