ADVERTISEMENT

ಅಲೋಕ್‌ ಅಮಾನತು ಆದೇಶ ವಾಪಸ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 22:40 IST
Last Updated 25 ಸೆಪ್ಟೆಂಬರ್ 2020, 22:40 IST
ಅಲೋಕ್‌ ಕುಮಾರ್
ಅಲೋಕ್‌ ಕುಮಾರ್   

ಬೆಂಗಳೂರು: ಒಂದಂಕಿ ಲಾಟರಿ ಪ್ರಕ ರಣದ ಆರೋಪಿ ಜತೆ ಸಂಪರ್ಕವಿಟ್ಟು ಕೊಂಡಿದ್ದರು ಎಂಬ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್ ಅವರನ್ನು ಅಮಾನತು ಮಾಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಸಂಬಂಧ ಸೆ. 21 ರಂದುಆದೇಶ ಹೊರಡಿಸಲಾಗಿದೆ.

2015ರಲ್ಲಿ ಹೆಚ್ಚು ಚರ್ಚೆಗೆ ಗ್ರಾಸ ವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಆರೋಪಿ ಪಾರಿರಾಜನ್ ಎಂಬಾತನನ್ನು ಬಂಧಿಸಲಾಗಿತ್ತು. ಆತನ ಜೊತೆ ಸಂಪರ್ಕವಿಟ್ಟುಕೊಂಡಿದ್ದಾರೆ ಎಂಬ ಆರೋಪದಡಿ ಅಲೋಕ್‌ ಅವರನ್ನು ಅಮಾನತು ಮಾಡಲಾಗಿತ್ತು. ನಂತರ, ಸಿಐಡಿ ಸಹ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ, ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅದರಲ್ಲಿ ಅಲೋಕ್‌ಕುಮಾರ್ ಅವರ ಹೆಸರು ಉಲ್ಲೇಖಿಸಿರಲಿಲ್ಲ. ಹೀಗಾಗಿ, ಪ್ರಕರಣಕ್ಕೂ ಅಲೋಕ್‌ಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲವೆಂಬುದು ಸಾಬೀತಾಗಿತ್ತು.

ADVERTISEMENT

‘ಅಲೋಕ್‌ಕುಮಾರ್ ಅವರ ಮೇಲಿನ ಆರೋಪಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಹೀಗಾಗಿ, ಅವರ ವಿರುದ್ಧ ಯಾವುದೇ ಇಲಾಖಾ ಶಿಸ್ತು ಕ್ರಮಗಳನ್ನು ಜರುಗಿಸುವುದಿಲ್ಲ. ಅಮಾನತಾದ ದಿನಗಳನ್ನು ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು’ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಲೋಕ್‌ಕುಮಾರ್ ಪ್ರಸ್ತುತ ಕೆಎಸ್‌ಆರ್‌ಪಿ ಎಡಿಜಿಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.