ADVERTISEMENT

ಕೊಲೆಯಲ್ಲಿ ಬಯಲಾಯ್ತು ‘ನಕಲಿ ಕ್ವಾರಂಟೈನ್’

* ಟೋಪಿ ಅನ್ಸರ್‌ ಹತ್ಯೆ ಪ್ರಕರಣ * ಕಾರ್ಪೊರೇಟರ್‌ ಕೈವಾಡ ಆರೋಪ; ಡಿಸಿಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 19:49 IST
Last Updated 16 ಜೂನ್ 2020, 19:49 IST
ಟೋಪಿ ಅನ್ಸರ್
ಟೋಪಿ ಅನ್ಸರ್   

ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಮಸೀದಿ ಬಳಿ ನಡೆದಿದ್ದ ಟೋಪಿ ಅನ್ಸರ್ ಪಾಷ ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿ ಸಿದ್ದು, ಈ ಕೊಲೆಗೆ ‘ನಕಲಿ ಕ್ವಾರಂಟೈನ್ ಪಟ್ಟಿ’ ಕಾರಣವಾಯ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

ಗುರಪ್ಪನಪಾಳ್ಯ ನಿವಾಸಿ ಅನ್ಸರ್, ಜೂನ್ 11ರಂದು ಸಂಜೆ ಮಸೀದಿಯಲ್ಲಿ ನಮಾಜ್ ಮುಗಿಸಿ ಹೊರಗೆ ಬಂದಿದ್ದರು. ಅವರ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಅನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಆರೋಪಿ ಗಳಾದಗುರುಪ್ಪನಪಾಳ್ಯದ ಕ್ರುದ್ಧೀನ್ (35), ಜಾಬೀರ್ (32), ಬಾಬಾಜಾನ್ (34) ಎಂಬುವರನ್ನು ಬಂಧಿಸಲಾಗಿದೆ.

ADVERTISEMENT

‘ಅನ್ಸರ್ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳನ್ನು, ಈ ಹಿಂದೆಯೇ ತಿಲಕ ನಗರ ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಅವರನ್ನು ಇದೇ ಅನ್ಸರ್ ಅವರೇ ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದರು’ ಎಂದು ಸುದ್ದಗುಂಟೆಪಾಳ್ಯ ಪೊಲೀಸರು ಹೇಳಿದರು.

ಕಾರ್ಪೋರೇಟರ್ ಕೈವಾಡ ಆರೋಪ: ‘ಪತಿ ಕೊಲೆ ಹಿಂದೆ ಕಾರ್ಪೋರೇಟ ರೊಬ್ಬರು, ಅವರ ಸಹೋದರ ಹಾಗೂ ಬೆಂಬಲಿಗರ ಕೈವಾಡವಿದೆ’ ಎಂದು ಕೊಲೆಯಾದ ಅನ್ಸರ್ ಅವರ ಪತ್ನಿ ಮುಜೀಬಾ ಫರ್ವಿನ್, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ. ‘ನಕಲಿ ಕ್ವಾರಂಟೈನ್ ಪಟ್ಟಿ’ ಬಗ್ಗೆಯೂ ಮಾಹಿತಿ ಹೊರಹಾಕಿದ್ದಾರೆ.

ಕೊರೊನಾ ಸೋಂಕಿತರೊಬ್ಬರ ಜೊತೆ ಯಾವುದೇ ಸಂಪರ್ಕವಿಲ್ಲದಿದ್ದರೂ 10 ವ್ಯಕ್ತಿಗಳ ಹೆಸರು ಉಲ್ಲೇಖಿಸಿ ನಕಲಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಟೋಪಿ ಅನ್ಸರ್ ಹೆಸರು ಸಹ ಇತ್ತು. ಅದನ್ನು ಪ್ರಶ್ನಿಸಿದ್ದ ಅನ್ಸರ್, ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ಅವರ ಹೆಸರನ್ನು ಕೈ ಬಿಟ್ಟಿದ್ದರು. ಈ ಬಗ್ಗೆ ಮಾಧ್ಯಮಕ್ಕೂ ಮಾಹಿತಿ ನೀಡುವುದಾಗಿ ಒಪ್ಪಿಕೊಂಡಿದ್ದರು. ‘ಈ ಪಟ್ಟಿ ಸಿದ್ಧಪಡಿಸುವಲ್ಲಿ ಕಾರ್ಪೋರೇಟರ್‌ ಕಡೆಯವರ ಕೈವಾಡವಿತ್ತು. ಅವರ ಹೆಸರು ಹೊರಬರುವ ಭೀತಿಯಲ್ಲಿ ಪತಿಯನ್ನು ಕೊಲೆ ಮಾಡಿ ಸಿರುವ ಅನುಮಾನ ಇದೆ’ ಎಂದು ಫರ್ವಿನ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.