ADVERTISEMENT

ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ: ತನಿಖೆ ಚುರುಕು; ಆರೋಪಿ ಪರಾರಿ ದೃಶ್ಯ ಸೆರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 15:51 IST
Last Updated 25 ಜುಲೈ 2025, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಬೆಂಗಳೂರು: ರೌಡಿ ಶೀಟರ್‌ ಶಿವಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವ ಕೊಲೆಯಾದ 15 ನಿಮಿಷದಲ್ಲಿ ಜಗದೀಶ್ ಅಲಿಯಾಸ್‌ ಜಗ್ಗ ಪರಾರಿ ಆಗಿದ್ದ ಎಂಬುದು ಭಾರತಿನಗರ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ADVERTISEMENT

ಹಲಸೂರಿನಲ್ಲಿ ಜುಲೈ 15ರಂದು ರಾತ್ರಿ 8ರ ಸುಮಾರಿಗೆ ಆರೋಪಿಗಳು ಶಿವಪ್ರಕಾಶ್‍ ಅವರನ್ನು ಕೊಲೆ ಮಾಡಿದ್ದರು. ಬಳಿಕ ಅದೇ ದಿನ ರಾತ್ರಿ ರಾತ್ರಿ 8.15ರ ಸುಮಾರಿಗೆ ಆರೋಪಿ ಜಗದೀಶ್, ಹೆಣ್ಣೂರಿನ ತನ್ನ ಅಪಾರ್ಟ್‍ಮೆಂಟ್‍ನಿಂದ ಪರಾರಿ ಆಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಸೂರು ಟೋಲ್‌ ಮೂಲಕ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. 

ಕೃತ್ಯ ನಡೆಯುವುದಕ್ಕೂ ಮುನ್ನ ಆರೋಪಿಗಳ ಜತೆಗೆ ರಾಮಮೂರ್ತಿನಗರದ ಹೋಟೆಲ್‌ನಲ್ಲಿ ಜಗ್ಗ ಸಭೆ ನಡೆಸಿದ್ದ. ಹೋಟೆಲ್‌ನಲ್ಲಿ ಕುಳಿತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕಾರು ಹತ್ತಿ ಆರೋಪಿ ಪರಾರಿ ಆಗುತ್ತಿರುವ ಫೋಟೊಗಳೂ ತನಿಖಾ ತಂಡಕ್ಕೆ ಸಿಕ್ಕಿವೆ. ಶಿವು ಅವರನ್ನು ಹತ್ಯೆ ಮಾಡುವುದಕ್ಕೂ ಮುನ್ನ ಹೋಟೆಲ್‌ನಲ್ಲಿ 15 ಆರೋಪಿಗಳು ಎರಡೂವರೆ ತಾಸು ಸಭೆ ನಡೆಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 

ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಕಿರಣ್‌ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಮಾಲೂರು ಮೂಲದ ಆರೋಪಿಯು ಬಂಧನ ಭೀತಿಯಿಂದ ಚಿಕ್ಕ ತಿರುಪತಿಯ ಲಾಡ್ಜ್​ವೊಂದರಲ್ಲಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೃತ್ಯಕ್ಕೆ ಸುಪಾರಿ ಪಡೆದಿದ್ದ ನಾಲ್ವರ ಜತೆಗೆ ಕಿರಣ್‌ ಗುರುತಿಸಿಕೊಂಡಿದ್ದ. ಬಿಕ್ಲು ಶಿವನನ್ನು ಹತ್ಯೆ ಮಾಡಲು ₹30 ಸಾವಿರ ಹಣ ಪಡೆದುಕೊಂಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕಿರಣ್‌ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೂ ಕೊಲೆ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿತ್ತು’ ಎಂದು ಪೊಲೀಸರು ಹೇಳಿದರು.

ತನಿಖಾಧಿಕಾರಿಗಳ ನೇಮಕ: ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಭಾರತಿನಗರ ಪೊಲೀಸರು ಇದುವರೆಗೂ ನಡೆಸಿದ ತನಿಖಾ ಕಡತಗಳನ್ನು ಸಿಐಡಿಗೆ ಅಧಿಕೃತವಾಗಿ ಹಸ್ತಾಂತರಿಸಲು ಸಿದ್ದತೆ ನಡೆಸಿದ್ದಾರೆ. 

ಅಲ್ಲದೇ ತನಿಖೆಗೆ ಸಿಐಡಿ ತಂಡ ಸಹ ರಚಿಸಲಾಗಿದೆ. ಡಿವೈಎಸ್ಪಿ ಉಮೇಶ್, ಇನ್​ಸ್ಪೆಕ್ಟರ್​ಗಳಾದ ಸಂದೀಪ್ ಮೇಟಿ, ಆರ್.ಮಂಜುನಾಥ್ ಹಾಗೂ ರಾಘವೇಂದ್ರ ತನಿಖಾ ತಂಡದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ್​ ಬಂಧನಕ್ಕೆ ಮತ್ತೊಂದೆಡೆ ಪೊಲೀಸರು ಬಲೆ ಬೀಸಿದ್ದಾರೆ. ಆದರೂ ಈವರೆಗೆ ಪತ್ತೆಯಾಗಿಲ್ಲ. ಹಾಗಾಗಿ ಆರೋಪಿ ವಿರುದ್ಧ ಭಾರತೀನಗರ ಠಾಣೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಮತ್ತೊಬ್ಬ ಆರೋಪಿ ಧನುಷ್‌ ಬಂಧನಕ್ಕೂ ಶೋಧ ನಡೆಸಲಾಗುತ್ತಿದೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ: ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳಿಗೆ ಆಗಸ್ಟ್‌ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.