ADVERTISEMENT

ನಿವೇಶನಕ್ಕೆ ನಕಲಿ ದಾಖಲೆ–ಮಾಲೀಕರ ಸೃಷ್ಟಿಸಿ ವಂಚನೆ

ಆರು ಮಂದಿ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:27 IST
Last Updated 20 ಜನವರಿ 2021, 18:27 IST

ಬೆಂಗಳೂರು: ಖಾಲಿ ನಿವೇಶನಗಳಿಗೆ ನಕಲಿ ದಾಖಲೆಗಳು ಹಾಗೂ ಮಾಲೀಕರನ್ನು ಸೃಷ್ಟಿಸಿ ವಂಚಿಸುತ್ತಿದ್ದ ಮಹಿಳೆಯೂ ಸೇರಿ ಆರು ಮಂದಿ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಕೀರ್ತನಾ (29), ಶೇಖರ್ (36), ಪವನ್ ಕುಮಾರ್ (36), ಉಮಾ ಮಹೇಶ್ ರಾವ್ (41) ಹಾಗೂ ಜಯಪ್ರಕಾಶ್‌ (39) ಬಂಧಿತರು.

ಆರೋಪಿಗಳು ನಿವೇಶನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಮಾಲೀಕರಿಂದಲೇ ಶುದ್ಧಕ್ರಯ ಪತ್ರ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. ಆರೋಪಿಗಳು ತೆರೆದಿದ್ದ ಬೇನಾಮಿ ಬ್ಯಾಂಕ್‌ ಖಾತೆಗಳಿಗೆ ಖರೀದಿದಾರರ ಡಿ.ಡಿ.ಗಳನ್ನು ಜಮಾ ಮಾಡಿಕೊಂಡು ಹಣ ದೋಚುತ್ತಿದ್ದರು.

ADVERTISEMENT

‘ಆರೋಪಿಗಳು ವಂಚನೆಗಾಗಿ ತೆರೆದಿದ್ದ ಬೇನಾಮಿ ಖಾತೆಗಳನ್ನು ಪತ್ತೆ ಹಚ್ಚಿದ್ದು, ವಂಚನೆ ಹಣದಿಂದ ಖರೀದಿಸಿದ್ದ ₹16.83 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು, ₹35 ಲಕ್ಷ ಮೌಲ್ಯದ ಮೂರು ದುಬಾರಿ ಕಾರುಗಳು ಹಾಗೂ ಒಂದು ರಾಯಲ್ ಎನ್‌ಫೀಲ್ಡ್‌ ಬೈಕ್ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

₹1ಕೋಟಿಗೆ ನಿವೇಶನ ವರ್ಗಾವಣೆ ಒಪ್ಪಂದ: ನಗರದ ಗೊಟ್ಟಿಗೆರೆಯ ಭಾಗ್ಯನಗರದ ಬಳಿ ನಿವೇಶನವೊಂದು ಮಾರಾಟಕ್ಕಿದ್ದು, ಮೈಕಲ್ ಡಿಸೋಜ ಎಂಬುವರಿಗೆ ಸೇರಿದ್ದು ಎಂದು ಆರೋಪಿಗಳು ಖರೀದಿದಾರರಿಗೆ ನಂಬಿಸಿದ್ದರು. ಇದನ್ನು ಚಕ್ರವರ್ತಿ ನಡುಪಾಂಡು ಎಂಬುವರ ಪತ್ನಿಯ ಹೆಸರಿಗೆ ಖರೀದಿಸಲು ₹1 ಕೋಟಿಗೆ ಒಪ್ಪಂದವೂ ಮಾಡಿಕೊಂಡಿದ್ದರು.

ನಿವೇಶನ ಖರೀದಿಗೆ ಆರೋಪಿಗಳ ಸಹಾಯದಿಂದ ಸಹಕಾರ ನಗರದ ಐಸಿಐಸಿಐ ಬ್ಯಾಂಕಿನಲ್ಲಿ ₹ 69.62 ಲಕ್ಷ ಸಾಲ ಪಡೆದಿದ್ದರು. ಬಳಿಕ ಬೊಮ್ಮನಹಳ್ಳಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧಿಕಾರಿಗಳು ತಂದಿದ್ದ ಸಾಲದ ಮೊತ್ತದ ಡಿ.ಡಿ.ಪಡೆದುಕೊಂಡು, ಮ್ಯಾಥ್ಯು ಎಂಬುವರನ್ನು ಕರೆ ತಂದು ನಿಜವಾದ ಮೈಕಲ್ ಡಿಸೋಜ (ನಿವೇಶನದ ಮಾಲೀಕ) ಎಂದು ನಂಬಿಸಿದ್ದರು.

ನಕಲಿ ಮಾಲೀಕನಿಂದಲೇ ಶುದ್ಧ ಕ್ರಯಪತ್ರದ ನೋಂದಣಿ ಮಾಡಿಸಿ, ಡಿ.ಡಿ.ಯನ್ನು ಪೂರ್ವಯೋಜಿತವಾಗಿ ಮಲ್ಲೇಶ್ವರದ ಬ್ಯಾಂಕ್‌ವೊಂದರಲ್ಲಿ ತೆರೆದಿದ್ದ ಬೇನಾಮಿ ಖಾತೆಗೆ ಜಮಾ ಮಾಡಿಕೊಂಡಿದ್ದರು. ಇದರಿಂದ ಗಳಿಸಿದ್ದ ಹಣವನ್ನು ಆರೋಪಿಗಳೆಲ್ಲ ಹಂಚಿಕೊಂಡು, ಬ್ಯಾಂಕಿಗೂ ವಂಚಿಸಿದ್ದರು. ವಂಚನೆಗೆ ಒಳಗಾದವರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.