ADVERTISEMENT

ಹಣಕ್ಕೆ ಒತ್ತಾಯಿಸಿ ಪತ್ನಿ, ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ

ಆರೋಪಿ ವಿರುದ್ಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 23:30 IST
Last Updated 8 ಮಾರ್ಚ್ 2025, 23:30 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಹಣ ತರುವಂತೆ ಒತ್ತಾಯಿಸಿ ಪತ್ನಿ ಹಾಗೂ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದ ಆರೋಪದ ಅಡಿ ಪತಿ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಆಂಧ್ರಪ್ರದೇಶದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.  

ಮಹಿಳೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಸಹಾಯಕ ಪ್ರಾಧ್ಯಾಪಕಿ ಆಗಿರುವ ರಮ್ಯಶ್ರೀ ಅವರಿಗೆ 2021ರಲ್ಲಿ ಪುಲಿ ಸಾಯಿಕುಮಾರ್ ಅವರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಮದುವೆ ಆಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ. ಠಾಣಾ ವ್ಯಾಪ್ತಿಯ ಬಡಾವಣೆಯಲ್ಲಿ ದಂಪತಿ ನೆಲಸಿದ್ದಾರೆ. 

‘ತುರ್ತು ಹಣ ಬೇಕಿದ್ದು ತಂದೆಯಿಂದ ಹಣ ಕೊಡಿಸುವಂತೆ ಸಾಯಿಕುಮಾರ್‌ ಒತ್ತಾಯಿಸಿದ್ದ. ಹಣ ತರಲು ರಮ್ಯಶ್ರೀ ಅವರು ನಿರಾಕರಿಸಿದ್ದರು. ಇದರಿಂದ ದಂಪತಿ ಮಧ್ಯೆ ಗಲಾಟೆ ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.

‘ಹಣ ಕೊಡಿಸದೇ ಇದ್ದರೆ ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಪತಿ ಬೆದರಿಸಿ ಚಾಕು ತೋರಿಸಿದ್ದ. ಮನೆಯಲ್ಲಿದ್ದ ರಮ್ಯಶ್ರೀ ಅವರ ತಂದೆ ಗಲಾಟೆ ಬಿಡಿಸಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಆಗ ಸಾಯಿಕುಮಾರ್‌, ಅಡುಗೆ ಮನೆಯಲ್ಲಿದ್ದ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಎರಡು ವರ್ಷದಿಂದಲೂ ಹಣಕ್ಕಾಗಿ ಗಲಾಟೆ ಮಾಡಿದ್ದ. ಆಗಲೂ ಒಪ್ಪಿರಲಿಲ್ಲ. ಹಲ್ಲೆ ನಡೆಸಿದ್ದ. ಗಲಾಟೆ ಸಂಬಂಧ 2023ರಲ್ಲಿ ಆರ್.ಆರ್. ನಗರ ಪೊಲೀಸರಿಗೆ ದೂರು ನೀಡಿದ್ದೆ ಎಂಬುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.