ADVERTISEMENT

ಕೆಲಸ ಸಿಗದಿದ್ದಕ್ಕೆ ಬೈಕ್ ಕಳ್ಳತನ: ಆರೋ‍ಪಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 6:39 IST
Last Updated 26 ನವೆಂಬರ್ 2021, 6:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಮೌಲಾಲಿ ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ನಿವಾಸಿ ಮೌಲಾಲಿ, ಸಿವಿಲ್ ಎಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದ್ದ. ಓದಿಗೆ ತಕ್ಕಂತೆ ಕೆಲಸ ಸಿಗದಿದ್ದರಿಂದ, ಬೈಕ್‌ ಕಳ್ಳತನಕ್ಕೆ ಇಳಿದಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆತನಿಂದ ₹ 15 ಲಕ್ಷ ಮೌಲ್ಯದ 10 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪರಪ್ಪನ ಅಗ್ರಹಾರ, ಸೂರ್ಯನಗರ, ಹೆಬ್ಬಗೋಡಿ ಹಾಗೂ ಆಂಧ್ರಪ್ರದೇಶದ ಬದ್ವೇಲ್, ತಿರುಪತಿ, ವಿಜಯವಾಡ ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಬೈಕ್‌ಗಳನ್ನು ಕದ್ದಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಮನೆ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಆರೋಪಿ ಕೃತ್ಯ ಎಸಗುತ್ತಿದ್ದ. ಬೈಕ್‌ಗಳ ಲಾಕ್‌ ಮುರಿಯುವುದರಲ್ಲಿ ಪರಿಣತಿ ಹೊಂದಿದ್ದ.’

ADVERTISEMENT

‘ಕರ್ನಾಟಕದಲ್ಲಿ ಕದ್ದ ಬೈಕ್‌ಗಳನ್ನು ಆಂಧ್ರಪ್ರದೇಶದಲ್ಲಿ ಆರೋಪಿ ಮಾರುತ್ತಿದ್ದ. ಆಂಧ್ರದಲ್ಲಿ ಕದ್ದ ಬೈಕ್‌ಗಳನ್ನು ಕರ್ನಾಟಕದಲ್ಲಿ ಮಾರಿ, ಹಣ ಗಳಿಸುತ್ತಿದ್ದ. ಇದೇ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದ’ ಎಂದೂ ತಿಳಿಸಿವೆ.

ಮಾರಲು ಬಂದು ಸಿಕ್ಕಿಬಿದ್ದ: ‘ರಾಯಲ್‌ ಎನ್‌ಫೀಲ್ಡ್‌ ಹಾಗೂ ಇತರೆ ದುಬಾರಿ ಬೆಲೆಯ ಬೈಕ್‌ಗಳನ್ನಷ್ಟೇ ಆರೋಪಿ ಕದಿಯುತ್ತಿದ್ದ. ಅದೇ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದ. ಆಂಧ್ರದಲ್ಲಿ ಕದ್ದಿದ್ದ ಬೈಕನ್ನು ನಗರದಲ್ಲಿ ಮಾರಲು ಬಂದಿದ್ದಾಗ ಆರೋಪಿ ಸಿಕ್ಕಿಬಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.