ADVERTISEMENT

ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಮಾಡಿ ಕೊಡುವುದಾಗಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 7:28 IST
Last Updated 18 ಫೆಬ್ರುವರಿ 2020, 7:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಮಾಡಿ ಕೊಡುವುದಾಗಿ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೊಲ್ಕತ್ತಾದ ನಿವಾಸಿ ಶೈಲೇಶ್ ಕೊಥಾರಿ ಅಲಿಯಾಸ್ ಗೌರವ್ ಕುಮಾರ್ ಡಾಗಾ (48) ಬಂಧಿತ. ಆರೋಪಿಯಿಂದ ₹ 2 ಲಕ್ಷ ನಗದು ಮತ್ತು ₹ 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿ ಶ್ರೀರಾಮಪುರದ ಬೂಪೇಶ್ ಭಾರತಿ ಎಂಬವರು ಆರೋಪಿಯನ್ನು ಸಂಪರ್ಕಿಸಿದ್ದರು. ಚೆನ್ನೈನ ಭಾರತ್ ವಿಶ್ವವಿದ್ಯಾಲಯದಲ್ಲಿ ಬಿ. ಟೆಕ್ ಸೀಟು ಮಾಡಿಕೊಡುತ್ತೇನೆ ಎಂದು ನಂಬಿಸಿದ ಆರೋಪಿ, ಬೂಪೇಶ್ ಅವರಿಂದ ₹ 1.70 ಲಕ್ಷ ಪಡೆದು ತಲೆಮರೆಸಿಕೊಂಡಿದ್ದ. ಈ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ತನಿಖೆ ನಡೆಸಿಸ ಸಿಸಿಬಿ ಪೊಲೀಸರು, ಆರೋಪಿಯನ್ನು ನಗರದಲ್ಲಿ ಬಂಧಿಸಿದ್ದಾರೆ.

ADVERTISEMENT

ನಕಲಿ ಜಾಹೀರಾತುಗಳನ್ನು ನೀಡುತ್ತಿದ್ದ ಆರೋಪಿ, ಸೀಟು ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ‌. ಆರೋಪಿ ಎರಡು ಆಧಾರ್ ಕಾರ್ಡ್ ಹೊಂದಿದ್ದು, ಅವುಗಳಲ್ಲಿ ನಂಬರ್ ಒಂದೇ ಇದೆ. ಆದರೆ, ವಿಳಾಸ ಬೇರೆ ಬೇರೆ ಇದೆ. ಪಾನ್ ಕಾರ್ಡ್‌ನಲ್ಲೂ ಬೇರೊಂದು ವಿಳಾಸವಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.