ADVERTISEMENT

ಖಾಸಗಿ ಕ್ಷಣದ ವಿಡಿಯೊ ಮೂಲಕ ಸುಲಿಗೆ: ಆರೋಪಿಯನ್ನು ಕೊಡಲಿಯಿಂದ ಕೊಂದ ದಂಪತಿ

ವ್ಯಕ್ತಿಯನ್ನು ಕೊಂದು ಮೃತದೇಹ ಗೋಣಿಚೀಲದಲ್ಲಿ ಕೊಂಡೊಯ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 6:43 IST
Last Updated 21 ನವೆಂಬರ್ 2019, 6:43 IST
   

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿ ಕೊಂಡೊಯ್ದು ಶಾಲಾ ಕಾಂಪೌಂಡ್‌ ಬಳಿ ಎಸೆದು ಹೋಗಿರುವ ಪ್ರಕರಣವನ್ನು ಭೇದಿಸಿರುವ ನಂದಿನಿ ಲೇಔಟ್ ಪೊಲೀಸರು, ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಹುಲಿಯೂರುದುರ್ಗದವರಾಗಿರುವ, ಲಗ್ಗೆರೆಯಲ್ಲಿ ನೆಲೆಸಿರುವ ಮಂಜು ಅಲಿಯಾಸ್ ಮಗ (35) ಮತ್ತು ಈತನ ಪತ್ನಿ ಸಾವಿತ್ರಿ (28) ಬಂಧಿತರು. ಸಂತೋಷ್‌ ಎಂಬಾತನನ್ನು ನ. 15ರಂದು ಆರೋಪಿಗಳು ಕೊಲೆ ಮಾಡಿದ್ದರು.

ಆರೋಪಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಟೊ ಚಾಲಕನಾಗಿರುವ ಮಂಜು, ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದ. ಕೊಲೆಯಾದ ಸಂತೋಷ್, ದಂಪತಿಗೆ ಪರಿಚಿತನಾಗಿದ್ದು, ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದ.

ADVERTISEMENT

ಮಂಜು ಬಳಿ ಸಂತೋಷ್ ಚೀಟಿ ಕೂಡ ಹಾಕಿದ್ದ. ದಂಪತಿಗೆ ಗೊತ್ತಿಲ್ಲದಂತೆ ಸಂತೋಷ್ ಅವರ ಮನೆಯ ಸ್ನಾನಗೃಹ ಮತ್ತು ಮಲಗುವ ಕೊಠಡಿಯಲ್ಲಿ ಕ್ಯಾಮೆರಾ ಇಟ್ಟಿದ್ದ. ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದಂಪತಿಯ ಖಾಸಗಿ ವಿಡಿಯೊವನ್ನು ಅವರಿಗೇ ತೋರಿಸಿ ಬೆದರಿಸಿದ್ದ. ಹಣ ಕೊಡದಿದ್ದರೆ ಇತರರಿಗೆ ವಿಡಿಯೊ ತೋರಿಸುವುದಾಗಿ ಬೆದರಿಕೆ ಒಡ್ಡಿದ್ದ. ಮರ್ಯಾದೆಗೆ ಅಂಜಿದ ದಂಪತಿ, 4–5 ವರ್ಷಗಳಿಂದ ಆರೋಪಿಗೆ ಸುಮಾರು ₹ 4 ಲಕ್ಷ ಹಣ ನೀಡಿದ್ದರು ಎಂದು ಗೊತ್ತಾಗಿದೆ.

ಅಲ್ಲದೆ, ಮಂಜುನ ಪತ್ನಿ ಜೊತೆ ಸಂತೋಷ್‌ ಅನುಚಿತವಾಗಿ ವರ್ತಿಸುತ್ತಿದ್ದ. ಆತನ ನಡವಳಿಕೆಯಿಂದ ಬೇಸತ್ತ ದಂಪತಿ, ಸಂತೋಷ್‌ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು. ಪೂರ್ವಯೋಜನೆಯಂತೆ, ಚೀಟಿ ವ್ಯವಹಾರದ ಬಗ್ಗೆ ಮಾತನಾಡಲು ನ. 15ರಂದು ರಾತ್ರಿ ಸಂತೋಷ್‌ನನ್ನು ಮನೆಗೆ ಕರೆಸಿಕೊಂಡಿದ್ದರು. ಸಂತೋಷ್‌ ಮನೆಗೆ ಬರುತ್ತಿದ್ದಂತೆ ಕೊಡಲಿಯಿಂದ ತಲೆಗೆ ಹೊಡೆದು
ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ, ಯಾರಿಗೂ ಸಂದೇಹ ಬಾರದಂತೆ ಲಗ್ಗೆರೆಯ ಮೌಂಟ್ ಸೆನೋರಿಯಾ ಶಾಲೆಯ ಕಾಂಪೌಂಡ್ ಬಳಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದರು.

ಮೃತದೇಹವನ್ನು ಮಂಜು ತನ್ನ ಆಟೋದಲ್ಲಿ ಸಾಗಿಸಿದ್ದ. ಶಾಲೆ ಕಾಂಪೌಂಡ್‌ ಬಳಿಗೆ ಆಟೋ ಬರುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮತ್ತು ದಂಪತಿಯ ಮನೆಗೆ ಸಂತೋಷ್‌ ಬಂದ ದೃಶ್ಯ ಆ ಪರಿಸರದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಅದರ ಆಧಾರದಲ್ಲಿ ದಂಪತಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ!

2013ರಲ್ಲಿ ಪರಿಚಯಸ್ಥರ ಮನೆಗೆ ಹೋಗಿದ್ದ ಸಂತೋಷ್‌, ಬಾಲಕಿಯೊಬ್ಬಳ ಖಾಸಗಿತನವನ್ನು ವಿಡಿಯೊ ಮಾಡಿದ್ದ. ಆ ವಿಡಿಯೊ ದೃಶ್ಯ ತೋರಿಸಿ ಬಾಲಕಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೋಷಕರನ್ನು ಬೆದರಿಸಿದ್ದ. ಈ ಸಂಬಂಧ ರಾಜಗೋಪಾಲನಗರ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದರು. ಪೋಕ್ಸೊ ಕಾಯ್ದೆಯಡಿ ಸಂತೋಷ್‌ನನ್ನು ಬಂಧಿಸಲಾಗಿತ್ತು. ಆತ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ. ಬಳಿಕ ಆತನಿಗೆ ಬುದ್ಧಿವಾದ ಹೇಳಿ, ತಾಯಿ ತನ್ನ ಪುತ್ರಿಯನ್ನು ಸಂತೋಷ್‌ಗೆ ವಿವಾಹ ಮಾಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.