ADVERTISEMENT

ವೃದ್ಧೆಗೆ ಚಿತ್ರಹಿಂಸೆ, ಕತ್ತಲು ಕೋಣೆಯಲ್ಲಿ ಕೊಲೆ

ವೃದ್ಧಾಶ್ರಮದ ಮುಖ್ಯಸ್ಥ ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 20:36 IST
Last Updated 16 ಆಗಸ್ಟ್ 2021, 20:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಆರ್‌.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿರುವ ‘ಉಸಿರು ಫೌಂಡೇಷನ್’ ವೃದ್ಧಾಶ್ರಮದ ಶಾಖೆಯಲ್ಲಿ ನಡೆದಿದ್ದ ವೃದ್ಧೆ ಕಮಲಮ್ಮ (82) ಕೊಲೆ ಪ್ರಕರಣ ಸಂಬಂಧ, ವೃದ್ಧಾಶ್ರಮದ ಮುಖ್ಯಸ್ಥ ಸೇರಿ ಐವರನ್ನು ಆರ್‌.ಎಂ.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

‘ಕಮಲಮ್ಮ ಅವರನ್ನು ಕತ್ತಲ ಕೋಣೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಊಟ ನೀಡದೇ ಚಿತ್ರಹಿಂಸೆ ಕೊಡಲಾಗಿತ್ತು. ಕತ್ತಲು ಕೋಣೆಯಲ್ಲೇ ವೃದ್ಧೆ ಕೊಲೆಯಾಗಿತ್ತು. ಸಾಕ್ಷ್ಯ ನಾಶ ಮಾಡಲು ಯತ್ನಿಸಲಾಗಿತ್ತು. ಕಮಲಮ್ಮ ಅವರ ಮಗ ಜಿ.ಕೆ. ರಾಮಚಂದ್ರ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವೃದ್ಧೆಗೆ ಚಿತ್ರಹಿಂಸೆ ನೀಡಿದ್ದ ಆರೋಪದಡಿ ‘ಉಸಿರು ಫೌಂಡೇಷನ್’ ಮುಖ್ಯಸ್ಥ ಯೋಗೇಶ್, ನೌಕರರಾದ ಭಾಸ್ಕರ್, ಪ್ರೇಮಾ, ಮಂಜುನಾಥ್ ಹಾಗೂ ವೃದ್ಧೆಯನ್ನು ಕೊಲೆ ಮಾಡಿದ್ದ ಆರೋಪದಡಿ ವಸಂತಮ್ಮ ಎಂಬುವರನ್ನು ಬಂಧಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ವೃದ್ಧಾಶ್ರಮಕ್ಕೆ ಸೇರಿಸಿದ್ದ ಮಗ: ‘ಹಳೇ ಮದ್ರಾಸ್ ರಸ್ತೆ ಭಟ್ಟರಹಳ್ಳಿ ನಿವಾಸಿ ಜಿ.ಕೆ. ರಾಮಚಂದ್ರ, ತಮ್ಮ ತಾಯಿ ಕಮಲಮ್ಮ ಅವರನ್ನು ನಾಗರಬಾವಿಯಲ್ಲಿರುವ ‘ಉಸಿರು ಫೌಂಡೇಷನ್’ ವೃದ್ಧಾಶ್ರಮಕ್ಕೆ ಮಾರ್ಚ್‌ನಲ್ಲಿ ಸೇರಿಸಿದ್ದರು. ತಿಂಗಳಿಗೆ ₹ 10 ಸಾವಿರ ಪಾವತಿಸುತ್ತಿದ್ದರು. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ, ಹೆಚ್ಚು ಕೂಗಾಡುತ್ತಿದ್ದರು. ಹೀಗಾಗಿ, ಅವರನ್ನು ಇತ್ತೀಚೆಗೆ ಆರ್‌.ಎಂ.ಸಿ ಯಾರ್ಡ್‌ ಠಾಣೆ ವ್ಯಾಪ್ತಿಯಲ್ಲಿರುವ ವೃದ್ಧಾಶ್ರಮದ ಮತ್ತೊಂದು ಶಾಖೆಗೆ ಸ್ಥಳಾಂತರಿಸಲಾಗಿತ್ತು.’

‘ಕತ್ತಲು ಕೋಣೆಯಲ್ಲಿ ಕಮಲಮ್ಮ ಅವರನ್ನು ಅಕ್ರಮ ಬಂಧನದಲ್ಲಿರಿಸಿದ್ದ ಸಿಬ್ಬಂದಿ, ಎರಡು ದಿನಕೊಮ್ಮೆ ಊಟ ನೀಡುತ್ತಿದ್ದರು. ಮಾನಸಿಕ ಕಾಯಿಲೆ ಇದೆಯೆಂಬ ಕಾರಣಕ್ಕೆ ಚಿತ್ರಹಿಂಸೆ ಕೊಡುತ್ತಿದ್ದರು. ಅದೇ ಕತ್ತಲು ಕೋಣೆಯಲ್ಲೇ ಆರೋಪಿ ವಸಂತಮ್ಮ ಅವರನ್ನೂ ಇರಿಸಲಾಗಿತ್ತು. ಆಗಸ್ಟ್ 7ರಂದು ಊಟದ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಅದೇ ಸಂದರ್ಭದಲ್ಲೇ ವಸಂತಮ್ಮ, ಕಮಲಮ್ಮ ತಲೆಗೆ ಹೊಡೆದಿದ್ದರು. ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದರಿಂದ ಕಮಲಮ್ಮ
ಕೋಣೆಯಲ್ಲಿ ಮೃತಪಟ್ಟಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಮೃತದೇಹವನ್ನು ಕೋಣೆಯಿಂದ ಬೇರೆಡೆ ಸಾಗಿಸಿದ್ದ ಸಿಬ್ಬಂದಿ, ಬಟ್ಟೆ ಬದಲಿಸಿದ್ದರು. ಕೋಣೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದರು. ಮಗ ರಾಮಚಂದ್ರ ಅವರಿಗೆ ಕರೆ ಮಾಡಿ, ಉಸಿರಾಟ ತೊಂದರೆಯಿಂದಾಗಿ ತಾಯಿ ತೀರಿಕೊಂಡಿರುವುದಾಗಿ ಸುಳ್ಳು ಹೇಳಿದ್ದರು.’

‘ವೃದ್ಧಾಶ್ರಮಕ್ಕೆ ಬಂದಿದ್ದ ರಾಮಚಂದ್ರ, ತಾಯಿ ಮೃತದೇಹ ನೋಡಿದ್ದರು. ದೇಹದ ಮೇಲೆ ಗಾಯದ ಗುರುತುಗಳು ಕಂಡಿದ್ದವು. ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.