ADVERTISEMENT

ಕಾರು ಬೆನ್ನಟ್ಟಿ ಗಾಜು ಒಡೆದು ಸುಲಿಗೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 19:07 IST
Last Updated 18 ಏಪ್ರಿಲ್ 2022, 19:07 IST
   

ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಕಾರೊಂದರ ಮಾಲೀಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಹೊಸಕೋಟೆ ಬೂದಿಗೆರೆಯ ಅಸ್ಲಂ ಪಾಷಾ (32) ಹಾಗೂ ಕೆ.ಜಿ.ಹಳ್ಳಿ ವೆಂಕಟೇಶಪುರದ ಸೈಯದ್ ಇಮ್ರಾನ್ (25) ಬಂಧಿತರು’ ಎಂದು ಪೊಲೀಸರು ಹೇಳಿದರು.

‘ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು, ನಗರದಲ್ಲಿ ಸುತ್ತಾಡಿ ಸುಲಿಗೆ ಮಾಡುತ್ತಿದ್ದರು. ಸಂಪಿಗೆಹಳ್ಳಿ, ಹೆಣ್ಣೂರು, ಕೊತ್ತನೂರು, ಸೋಲದೇವನಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಬಾಗಲೂರು ಠಾಣೆಗಳ ವ್ಯಾಪ್ತಿಗಳಲ್ಲೂ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ADVERTISEMENT

‘ದೂರುದಾರ ಕೆ.ವಿಜೀಶ್, ಚಾಲಕ, ಸ್ನೇಹಿತರ ಜೊತೆ ಏಪ್ರಿಲ್ 9ರಂದು ಫಾರ್ಚೂನರ್ ಕಾರಿನಲ್ಲಿ ಬಾಗಲೂರು ವೃತ್ತದಿಂದ ರೇವಾ ಕಾಲೇಜು ಕಡೆ ಹೊರಟಿದ್ದರು. ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಆರೋಪಿಗಳು ಕಾರು ಅಡ್ಡಗಟ್ಟಿದ್ದರು.’

‘ಕಾರಿನ ಬಲಭಾಗದ ಬಾಗಿಲಿನ ಗಾಜನ್ನು ಆರೋಪಿಗಳು ಒಡೆದಿದ್ದರು. ನಂತರ, ಚಾಕು ತೋರಿಸಿ ಬೆದರಿಸಿದ್ದರು. ದೂರುದಾರರ ಮೊಬೈಲ್, ₹ 5,000 ನಗದು ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದರು.

‘ಘಟನೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ, ತನಿಖೆ ನಡೆಸಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.