ADVERTISEMENT

ತಾಯಿ-ಮಗಳಿಗೆ ₹ 1 ಲಕ್ಷ ವೆಚ್ಚ: ಸತ್ಯಾಂಶ ಮರೆಮಾಚುವ ಯತ್ನ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:40 IST
Last Updated 10 ಜೂನ್ 2022, 19:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿಯ ಪರವಾಗಿ ಜಿಪಿಎ (ಜನರಲ್ ಪವರ್‌ ಆಫ್‌ ಅಟಾರ್ನಿ– ಕಾರ್ಯನಿರ್ವಾಹಕನವ್ಯವಹಾರಗಳನ್ನು ಪ್ರತಿನಿಧಿಸುವ ಅಧಿಕಾರ ಹೊಂದಿ ರುವವರು) ಮೂಲಕ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಇಂತಹ ಪ್ರಕರಣ ವೊಂದರಲ್ಲಿ ತಾಯಿ ಮತ್ತು ಮಗಳಿಗೆ 1 ಲಕ್ಷ ರೂಪಾಯಿ ಮೊತ್ತ ವನ್ನು ವೆಚ್ಚದ ರೂಪದಲ್ಲಿ ಭರಿಸುವಂತೆ ಆದೇಶಿಸಿದೆ.

‘ವಂಚನೆ, ಕಳವು, ಸುಲಿಗೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಕೊಲ್ಕತ್ತದ ತಾಯಿ ಮತ್ತು ಮಗಳ ಪರವಾಗಿ ಜಿಪಿಎ ಹಕ್ಕುದಾರರ ಮೂಲಕ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ಅರ್ಜಿ ವಿಚಾರಣೆಯ ಮಾನ್ಯತೆ ಹೊಂದಿಲ್ಲ’ ಎಂದು ವಜಾಗೊಳಿಸಿದೆ.

‘ಲಂಡನ್‌ನಲ್ಲಿ ನೋಟರಿ ಮಾಡಿ ದೃಢೀಕರಿಸಲಾಗಿರುವ ಈ ಜಿಪಿಎ ಅನ್ನು ಬೆಂಗಳೂರಿನಲ್ಲಿ ಕಾರ್ಯಗತಗೊಳಿಸಲಾಗಿದೆ. ಅಂತೆಯೇ, ಅರ್ಜಿದಾರರು ಮುಸ್ಲಿಮರಲ್ಲ. ಆದರೆ, ಅವರು ಕ್ರಿಶ್ಚಿಯನ್ ಆಗಿರುವಾಗ ತಮ್ಮನ್ನು ತಾವು ಮುಸ್ಲಿಮರೆಂದು ತೋರಿಸಿಕೊಂಡಿದ್ದಾರೆ ಎಂಬ ದೂರುದಾರರ ಆರೋಪವೂ ಸೇರಿದಂತೆತಮ್ಮ ವಿರುದ್ಧದಬಹುಕೋಟಿ ರೂಪಾಯಿ ವಂಚನೆ ಆರೋಪಗಳನ್ನು ಮುಚ್ಚಿಟ್ಟಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಸಮಂತಾ ಕ್ರಿಸ್ಟೀನಾ ಡೆಲ್ಫಿನಾ ವಿಲ್ಲೀಸ್‌ (25) ಮತ್ತು ಅವರ ತಾಯಿ ಶಕೀಲಾ ವಿಲ್ಲೀಸ್‌ (56) ಪರವಾಗಿ ಅವರ ಕುಟುಂಬದ ಸ್ನೇಹಿತಗೌತಮ್ ಗಿರಿ ಎಂಬುವರು ಜಿಪಿಎ ಪಡೆದು ಈ ಅರ್ಜಿ ಸಲ್ಲಿಸಿದ್ದರು.

ಪ್ರಕರಣವೇನು?: ‘ನನ್ನ ಪತ್ನಿ ಕ್ರಿಸ್ಟೀನಾ ಡೆಲ್ಫಿನಾ ವಿಲ್ಲೀಸ್‌ ಮತ್ತು ಆಕೆಯ ತಾಯಿ ನನಗೆ ಸೇರಿದ ಚಿನ್ನಾಭರಣ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾರೆ’ ಎಂದು ಕ್ರಿಸ್ಟೀನಾ ಪತಿ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.