ADVERTISEMENT

ಜುಲೈ 10ರಿಂದ ‘ಒಂದು ವಾರ ಒಂದು ಲ್ಯಾಬ್‌’ ಅಭಿಯಾನ

ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 14:40 IST
Last Updated 19 ಜೂನ್ 2023, 14:40 IST
ಶ್ರೀದೇವಿ ಜಡೆ
ಶ್ರೀದೇವಿ ಜಡೆ   

ಬೆಂಗಳೂರು: ನಗರದಲ್ಲಿರುವ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್‌)ಯಲ್ಲಿ ನಡೆಯುತ್ತಿರುವ ಸಂಶೋಧನೆ, ವೈಜ್ಞಾನಿಕ ಆವಿಷ್ಕಾರಗಳು ಹಾಗೂ ತಾಂತ್ರಿಕ ಪ್ರಗತಿಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಜುಲೈ 10ರಿಂದ 15ರ ತನಕ ‘ಒಂದು ವಾರ ಒಂದು ಲ್ಯಾಬ್‌’ ಎಂಬ ಅಭಿಯಾನ ಆಯೋಜಿಸಲಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‌ಐಆರ್‌–4ಪಿಐನ (ನಾಲ್ಕನೇ ಪ್ಯಾರಾಡೈಮ್‌ ಸಂಸ್ಥೆ) ಮುಖ್ಯಸ್ಥೆ ಡಾ.ಶ್ರೀದೇವಿ ಜಡೆ ಮಾತನಾಡಿ, ‘ದೇಶದಲ್ಲಿ ಸಿಎಸ್‌ಐಆರ್‌ನ 37 ಪ್ರಯೋಗಾಲಯಗಳಿವೆ. ಅವುಗಳಲ್ಲಿ ಜನರಿಗೆ ಅಗತ್ಯವುಳ್ಳ ಸಂಶೋಧನೆಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ಆವಿಷ್ಕಾರಗಳು ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ವಿಜ್ಞಾನ ಕ್ಷೇತ್ರದ ಆಸಕ್ತರಿಗೆ ಇದುವರೆಗೂ ತಿಳಿಯುತ್ತಿರಲಿಲ್ಲ. ಇವುಗಳ ಅನುಕೂಲಗಳ ಬಗ್ಗೆ ತಿಳಿಸಲು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರ ಸೂಚನೆಯಂತೆ ಈ ಅಭಿಯಾನ ಆಯೋಜಿಸಲಾಗಿದೆ. ದೇಶದ ಎಲ್ಲ ಪ್ರಯೋಗಾಲಯಗಳಲ್ಲೂ ಅಭಿಯಾನ ನಡೆಯುತ್ತಿದೆ. ಸೆಪ್ಟೆಂಬರ್‌ಗೆ ಅಭಿಯಾನ ಮುಕ್ತಾಯವಾಗಲಿದೆ’ ಎಂದು ಮಾಹಿತಿ ನೀಡಿದರು.

ಸೂಪರ್‌ ಕಂಪ್ಯೂಟಿಂಗ್‌ ಸೌಲಭ್ಯದ ಕೊಠಡಿ ಉದ್ಘಾಟನೆ ಜೂನ್‌ 21ರಂದು ನಡೆಯಲಿದೆ. ಸಿಎಸ್ಐಆರ್‌ನ ಮಹಾ ನಿರ್ದೇಶಕಿ ಡಾ.ಎನ್‌.ಕಲೈಸೆಲ್ವಿ ಹಾಗೂ ಕೆಎಸ್‌ಎಂಡಿಎ ಆಯುಕ್ತ ಡಾ.ಮನೋಜ್‌ ರಂಜನ್‌ ಪಾಲ್ಗೊಳ್ಳಲಿದ್ದಾರೆ ಎಂದು ಶ್ರಿದೇವಿ ಮಾಹಿತಿ ನೀಡಿದರು.

ADVERTISEMENT

ಹವಾಮಾನ ಬದಲಾವಣೆ, ಸ್ಮಾರ್ಟ್‌ ಕೃಷಿ, ಮೇಘಸ್ಫೋಟ, ಸೂಪರ್ ಕಂಪ್ಯೂಟಿಂಗ್‌, ಭೂಗೋಳ, ವೈಮಾನಿಕ ಕ್ಷೇತ್ರ, ಆಹಾರ ಕ್ಷೇತ್ರವೂ ಸೇರಿದಂತೆ ಹಲವು ಸಂಶೋಧನೆಗಳು ಸಂಸ್ಥೆಯಲ್ಲಿ ನಡೆಯುತ್ತಿವೆ ಎಂದರು.

ಅಭಿಯಾನದ ಸಂಯೋಜಕ ಡಾ.ಇಮ್ತಿಯಾಜ್‌ ಪರ್ವೇಜ್‌ ಮಾತನಾಡಿ, ‘ಜುಲೈನಲ್ಲಿ ಆರು ದಿನವೂ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ. ತಜ್ಞರ ಮಾತು, ಸಂವಾದ, ನವೋದ್ಯಮಿಗಳ ಜತೆಗೆ ಒಪ್ಪಂದಕ್ಕೆ ಸಹಿ, ರೋಡ್‌ಶೋ, ಸಂಸ್ಥೆಯ ಲ್ಯಾಬ್‌ಗಳಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಜಿ.ಕೆ.ಪಾತ್ರ, ಡಾ.ಆರ್‌.ಪಿ.ತಂಗವೇಲು, ಎಂ.ಕೆ.ಶಾರದಾ, ಡಾ.ವಿ.ಅನಿಲ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.