ಬೆಂಗಳೂರು: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್) ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ವಲಯದ ಪ್ರಗತಿಗೆ ಹೆಚ್ಚು ಬಳಕೆ ಮಾಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ ಸಲಹೆ ನೀಡಿದರು.
‘ವಿಕಸಿತ ಭಾರತ: ಅಂತರ್ಗತ ಬೆಳವಣಿಗೆ, ಸುಸ್ಥಿರ ಭವಿಷ್ಯ’ ಎಂಬ ವಿಷಯದ ಮೇಲೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಸ್‌ಆರ್ ಪ್ರಶಸ್ತಿಗಳನ್ನು ಗುರುವಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಭಾರತದಲ್ಲಿ ಸಿಎಸ್‌ಆರ್ ನಿಧಿ ಬಳಕೆ ವಿಚಾರದಲ್ಲಿ ದಶಕದ ಹಿಂದೆಯೇ ಕಾನೂನು ಜಾರಿಗೊಂಡಿದೆ. ಕಳೆದ ವರ್ಷದಲ್ಲಿಯೇ ಒಟ್ಟು ₹34 ಸಾವಿರ ಕೋಟಿ ಸಿಎಸ್‌ಆರ್ ನಿಧಿ ಬಳಕೆಯಾಗಿದೆ. ಕರ್ನಾಟಕದಲ್ಲಿ ಈ ನಿಧಿಯಲ್ಲಿ ₹2,500 ಕೋಟಿ ಬಳಸಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕವು ಮಾಹಿತಿ ತಂತ್ರಜ್ಞಾನ, ಕೃಷಿ, ಆರೋಗ್ಯ, ಶಿಕ್ಷಣ ವಲಯದಲ್ಲಿ ಮುಂಚೂಣಿಯಲ್ಲಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ರೂಪಿಸಿದ ನೀತಿಗಳು ಫಲ ನೀಡಿ ಬೆಂಗಳೂರು ನಗರ ಸಾಫ್ಟ್‌ವೇರ್ ರಫ್ತು ವಲಯದಲ್ಲಿ ಪ್ರಮುಖ ನಗರವಾಗಿ ಹೊರ ಹೊಮ್ಮಿದೆ. ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆಗಳು ಲಭಿಸುತ್ತಿವೆ ಎಂದು ಹೇಳಿದರು.
ಉದಾರೀಕರಣ ನೀತಿಗೆ ಭಾರತ ತೆರೆದುಕೊಂಡ ನಂತರ ಭಾರತ ಜಾಗತಿಕ ಮಟ್ಟದಲ್ಲಿ ಸಮರ್ಥವಾಗಿ ಬೆಳೆದಿದೆ. ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಹಿಂದೆ ಅಮೆರಿಕವನ್ನು ನಾವು ಅವಲಂಬಿಸುವ ಸ್ಥಿತಿಯಿತ್ತು. ಈಗ ಹಾಗಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸುಂಕದ ವಿಚಾರದಲ್ಲಿ ತಿರುಗೇಟು ನೀಡುವ ಹಂತಕ್ಕೆ ಭಾರತ ಬೆಳೆದಿದೆ. ಇದರಲ್ಲಿ ಉದ್ಯಮ ವಲಯದ ಪಾತ್ರವೂ ಇದೆ ಎಂದು ನುಡಿದರು.
ಸಂಸ್ಥೆ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ನಿಯೋಜಿತ ಅಧ್ಯಕ್ಷರಾದ ಉಮಾರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಮತ್ತು ಸಿಎಸ್ಆರ್ ಸಮಿತಿ ಅಧ್ಯಕ್ಷ ಕೀರ್ತನ್ ಕುಮಾರ್ ಹಾಜರಿದ್ದರು.
ಉದ್ಯಮ ವಲಯದಲ್ಲಿ ಉತ್ತಮ ಸಾಧನೆ ಮಾಡಿದ 30ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸಿಎಸ್‌ಆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಎಸ್‌ಆರ್
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ ಸಂಸ್ಥೆಯು ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಉದ್ಯಮದ ಸಿಎಸ್ಆರ್ ನಿಧಿಯನ್ನು ಬಳಸಿಕೊಳ್ಳುವಂತೆ ಗೃಹ ಸಚಿವರನ್ನು ಕೋರಿತು. ಸೌರಶಕ್ತಿ ಚಾಲಿತ ಸಂಚಾರ ಸಿಗ್ನಲ್‌ಗಳು ಶೂನ್ಯ-ತ್ಯಾಜ್ಯ ಪೊಲೀಸ್ ಠಾಣೆಗಳು ಮತ್ತು ಇತರ ಸುಸ್ಥಿರ ಪರಿಹಾರಗಳನ್ನು ಸ್ಥಾಪಿಸಲು ಪೊಲೀಸ್ ಇಲಾಖೆಯು ಸಿಎಸ್ಆರ್ ನಿಧಿಯನ್ನು ಬಳಸಬಹುದು ಎಂದು ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮಾಡಿದ ಮನವಿಗೆ ಗೃಹ ಸಚಿವರು ಸಮ್ಮತಿ ಸೂಚಿಸಿದರು.
ಸರ್ಕಾರದಿಂದಲೇ ಎಲ್ಲವನ್ನೂ ಮಾಡಲಾಗದು. ಉದ್ಯಮ ವಲಯದ ಬೆಂಬಲವೂ ಬೇಕಾಗುತ್ತದೆ. ಉದ್ಯಮಿಗಳು ಸಿಎಸ್‌ಆರ್ ಮೂಲಕ ಕೈ ಜೋಡಿಸಬೇಕು.- ಜಿ.ಪರಮೇಶ್ವರ್, ಗೃಹ ಸಚಿವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.