ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅವಾಚ್ಯ ಪದದಿಂದ ನಿಂದಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಗುರುವಾರ ಇಬ್ಬರನ್ನು ವಿಚಾರಣೆಗೆ ಒಳಪಡಿಸಿ, ಹೇಳಿಕೆ ದಾಖಲಿಸಿಕೊಂಡಿತು.
ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯರಾದ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಅವರು ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ, ಘಟನೆ ಕುರಿತು ಮಾಹಿತಿ ನೀಡಿದರು. ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು.
‘ಕಲಾಪದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಶ್ಲೀಲ ಪದ ಬಳಸಿದ್ದು ನಿಜ. ರವಿ ಅವರು ಬಳಸಿದ್ದ ಪದವನ್ನು ನಾವು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇವೆ. ಸಚಿವರೂ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಸ್ಥಳದಲ್ಲಿದ್ದ ನಾವೂ ಸಹ ರವಿ ವಿರುದ್ಧ ಪ್ರತಿಭಟನೆ ನಡೆಸಿದ್ದೆವು ಎಂಬುದಾಗಿ ಇಬ್ಬರೂ ಹೇಳಿಕೆ ನೀಡಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಉಮಾಶ್ರೀ ಅವರನ್ನು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ತನಕ, ನಾಗರಾಜ್ ಯಾದವ್ ಅವರನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ತನಕ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಲಿಖಿತ ಮತ್ತು ಮೌಖಿಕ ರೂಪದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜತೆಗೆ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಯತೀಂದ್ರ ವಿಚಾರಣೆ ಸಾಧ್ಯತೆ:
‘ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಿ ಅವರ ಹೇಳಿಕೆಯನ್ನೂ ದಾಖಲು ಮಾಡಿಕೊಳ್ಳಲಾವುದು’ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.
ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ನಾಗರಾಜ್ ಯಾದವ್ ಅವರು ‘ಪರಿಷತ್ ಕಲಾಪದಲ್ಲಿ ನಡೆದ ಘಟನೆಯನ್ನು ತನಿಖಾಧಿಕಾರಿಗಳ ಎದುರು ವಿವರಿಸಿದ್ದೇನೆ. ಯಾವ ಮಹಿಳೆಗೂ ಆ ರೀತಿಯ ಅಶ್ಲೀಲ ಪದ ಬಳಸಬಾರದು. ಸಿ.ಟಿ.ರವಿ ಅವರು ಮೊಂಡುತನ ಬಿಟ್ಟು ಕ್ಷಮೆ ಕೇಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.