ADVERTISEMENT

ಕಬ್ಬನ್ ಉದ್ಯಾನದಲ್ಲಿ ಬಹುಮಹಡಿ ಕಟ್ಟಡ,ನಿಯಮದಲ್ಲಿದ್ದರೆ ಮಾತ್ರ ಒಪ್ಪಿಗೆ:ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 2:17 IST
Last Updated 31 ಅಕ್ಟೋಬರ್ 2019, 2:17 IST
ಕಬ್ಬನ್‌ ಉದ್ಯಾನ – ಸಾಂದರ್ಭಿಕ ಚಿತ್ರ
ಕಬ್ಬನ್‌ ಉದ್ಯಾನ – ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ವಿಮಾ ಇಲಾಖೆಗಾಗಿ (ಕೆಜಿಐಡಿ) ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್‌ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ, ‘ನಿಯಮಗಳಿಗೆ ಪೂರಕವಾಗಿದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು’ ಎಂದು ಹೇಳಿದೆ.

ಗಾಂಧಿನಗರ ವಿಭಾಗದ ಸಮಗ್ರ ಅಭಿವೃದ್ಧಿ ಯೋಜನಾ ನಕ್ಷೆಯ ಪ್ರಕಾರ, ಕಬ್ಬನ್‌ ಪಾರ್ಕ್‌ ಪ್ರದೇಶವು ‘ಹಸಿರು ವಲಯ’ ಎಂದು ಗುರುತಿಸಲ್ಪಟ್ಟಿದೆ. ಹಸಿರು ವಲಯ ಅಥವಾ ಪ್ರದೇಶದಲ್ಲಿ ಉದ್ಯಾನ, ಆಟದ ಮೈದಾನ, ಸ್ಮಶಾನ ಮಾತ್ರ ನಿರ್ಮಿಸಬೇಕು. ಅಲ್ಲದೆ, ಈಗ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿರುವ ಪ್ರದೇಶ ‘ಸರ್ಕಾರಿ/ಅರೆ ಸರ್ಕಾರಿ’ ಎಂದು ಗುರುತಿಸಲಾಗಿದೆ. ಇಂತಹ ಹಸಿರು ಪ್ರದೇಶದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಹುಬ್ಬೇರುವಂತೆ ಮಾಡಿದೆ.

‘ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಆದರೆ, ಹಸಿರು ವಲಯದಲ್ಲಿ ಇಂತಹ ಕಟ್ಟಡ ನಿರ್ಮಾಣಕ್ಕೆ, ಕಾನೂನಿನಲ್ಲಿ ಅವಕಾಶವಿದ್ದರೆ ಮತ್ತು ಬಿಬಿಎಂಪಿಯ ಕಟ್ಟಡ ನಿರ್ಮಾಣ ನಿಯಮಗಳು ಇದಕ್ಕೆ ಪೂರಕವಾಗಿದ್ದರೆ ಮಾತ್ರ ಮುಂದುವರಿಯಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉದ್ದೇಶಿತ ಕಟ್ಟಡದ ಎತ್ತರದ ಬಗ್ಗೆಯೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ 3ಕ್ಕೆ ಪ್ರತಿಭಟನೆ

ಕಬ್ಬನ್‌ ಉದ್ಯಾನದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಡೆಗೆ ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘವು ಆಕ್ರೋಶ ವ್ಯಕ್ತಪಡಿಸಿದ್ದು, ನವೆಂಬರ್‌ 3ರಂದು ಪ್ರತಿಭಟನೆಗೆ ಮುಂದಾಗಿದೆ.

ಸಂಘದ ಅಧ್ಯಕ್ಷ ಎಸ್‌.ಉಮೇಶ್‌,‘ ಕಟ್ಟಡ ನಿರ್ಮಾಣಕ್ಕೆ ಈಗ ಅವಕಾಶ ನೀಡಿದರೆ, ಖಾಸಗಿ ಹಾಗೂ ಅನಧಿಕೃತ ಕಾಮಗಾರಿಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಬೆಂಗಳೂರಿನಲ್ಲಿ ಕಬ್ಬನ್‌ ಹಾಗೂ ಲಾಲ್‌ಬಾಗ್ ಉದ್ಯಾನಗಳು ಬಿಟ್ಟು ಸಾರ್ವಜನಿಕರು ಇನ್ನೆಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.

‘ವಾಯುವಿಹಾರಿಗಳು ಹಾಗೂ ನಾಗರಿಕರ ಜತೆಗೂಡಿ ಕಬ್ಬನ್‌ ಉದ್ಯಾನದ ಮಹಾರಾಜ ಪ್ರತಿಮೆ ಎದುರು ನವೆಂಬರ್‌ 3ರಂದು ಬೆಳಿಗ್ಗೆ 7 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.