ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಖಾಸಗಿ ಆರ್ಟ್ ಗ್ಯಾಲರಿ ನಿರ್ಮಿಸಲು ಐದು ಎಕರೆ ಜಾಗವನ್ನು ಉದ್ಯಮಿಯೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದನ್ನು ಕಬ್ಬನ್ ಉದ್ಯಾನದ ವಾಯು ವಿಹಾರಿಗಳು ಖಂಡಿಸಿದ್ದಾರೆ.
‘ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪೂರ್ವಭಾವಿ ನಡೆದಿತ್ತು. ಕಬ್ಬನ್ ಉದ್ಯಾನಕ್ಕೆ ಸಂಪರ್ಕ ಕಲ್ಪಿಸುವ ಕಸ್ತೂರ ಬಾ ರಸ್ತೆಯ ಸೌಂದರ್ಯೀಕರಣ ಮಾಡುವುದು, ಕಬ್ಬನ್ ಉದ್ಯಾನದಲ್ಲಿ ಖಾಸಗಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ಆಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಆದೇಶಗಳು ಬಂದಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಮೂಲಗಳು ತಿಳಿಸಿವೆ.
‘300 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಕಬ್ಬನ್ ಉದ್ಯಾನ ಈಗ 197 ಎಕರೆ ಮಾತ್ರ ಉಳಿದಿದೆ. ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಾನದ ಜಾಗವನ್ನು ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿರುವುದು ಖಂಡನೀಯ. ಕಬ್ಬನ್ ಉದ್ಯಾನದಲ್ಲಿ ಖಾಸಗಿ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಅನುಮತಿ ನೀಡಿದರೆ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ನೇತೃತ್ವದಲ್ಲಿ ಬಹೃತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಂಘದ ಅಧ್ಯಕ್ಷ ಎಸ್. ಉಮೇಶ್ ತಿಳಿಸಿದರು.
‘ಶಾಲಿನಿ ರಜನೀಶ್ ಅವರು ಖಾಸಗಿ ಉದ್ಯಮಿಯೊಬ್ಬರಿಗೆ ಕಬ್ಬನ್ ಉದ್ಯಾನದ ಐದು ಎಕರೆ ಜಾಗ ನೀಡಲು ಮುಂದಾಗಿರುವುದು ಖಂಡನೀಯ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ ಶಾಲಿನಿ ರಜನೀಶ್ ಅವರು ಎಲ್ಲ ನಿಯಮಗಳನ್ನು ಮೀರಿ ಗುತ್ತಿಗೆ ನೀಡುವ ಜಾಗವನ್ನು ಸಮೀಕ್ಷೆ ಮಾಡಿಸಿದ್ದಾರೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ದೂರಿದ್ದಾರೆ.
‘ಕಬ್ಬನ್ ಉದ್ಯಾನದ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಬಾರದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.