ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಕಬ್ಬನ್ ಉದ್ಯಾನದಲ್ಲಿ ಆಗಾಗ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಖಾಸಗಿಯವರಿಗೆ ಜಾಗ ನೀಡುವ ಪ್ರಸ್ತಾವಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಈ ಉದ್ಯಾನದ ಐದು ಎಕರೆ ಜಾಗವನ್ನು ಖಾಸಗಿ ಕಲಾ ಕೇಂದ್ರ ನಿರ್ಮಿಸಲು ಉದ್ಯಮಿಯೊಬ್ಬರಿಗೆ ಅವಕಾಶ ನೀಡುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ವಾಯು ವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ಕಾರಣವಾಗಿದೆ.
ಕಬ್ಬನ್ ಉದ್ಯಾನ 300 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿತ್ತು. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕಟ್ಟಡಗಳನ್ನು ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿದ್ದರಿಂದ ಈಗ 197 ಎಕರೆಗೆ ಕುಗ್ಗಿದೆ. ಉದ್ಯಾನದಲ್ಲಿ ವಿವಿಧ ಜಾತಿಯ 8,837 ಮರಗಳಿದ್ದು, 197ಕ್ಕೂ ಹೆಚ್ಚು ಪಾರಂಪರಿಕ ಪ್ರಭೇದಗಳಿವೆ. ಕಬ್ಬನ್ ಉದ್ಯಾನದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಸಾವಿರಾರು ಮರಗಳಿವೆ. ಪ್ರತಿ ಮರವೂ ವಿಭಿನ್ನವಾದ ಗುಣಲಕ್ಷಣಗಳನ್ನು ಒಳಗೊಂಡಿದೆ.
ಕಬ್ಬನ್ ಉದ್ಯಾನದಲ್ಲಿ ಈಗಾಗಲೇ ಕರ್ನಾಟಕ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಕ್ರೀಡಾಂಗಣ, ಸೆಂಚುರಿ ಕ್ಲಬ್, ಒಂಬತ್ತು ಎಕರೆ ಪ್ರದೇಶದಲ್ಲಿರುವ ಬಾಲಭವನ, ಹೈಕೋರ್ಟ್, ಲೋಕಪಯೋಗಿ ಇಲಾಖೆ, ಪೊಲೀಸ್ ಕಚೇರಿ, ಮತ್ಸ್ಯಾಲಯ, ವೆಂಕಟಪ್ಪ ಕಲಾ ಕೇಂದ್ರ, ವಿಶ್ವೇಶ್ವರಯ್ಯ ಮೂಸಿಯಂ, ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ ಕಟ್ಟಡಗಳಿವೆ. ಈಗ ಮತ್ತೊಂದ ಖಾಸಗಿ ಕಲಾ ಕೇಂದ್ರ ಪ್ರಾರಂಭಿಸಿದರೆ ಪರಿಸರ ಹಾಗೂ ಇಲ್ಲಿನ ಜೀವಸಂಕುಲಕ್ಕೆ ಹಾನಿಯಾಗಲಿದೆ.
‘ಕಬ್ಬನ್ ಉದ್ಯಾನದಲ್ಲಿ ಒಂದು ವರ್ಷದ ಹಿಂದೆ 10 ಅಂತಸ್ತಿನ ಕಟ್ಟಡ ನಿರ್ಮಿಸಲು ಸರ್ಕಾರ ಅನುಮತಿ ನೀಡಿತ್ತು. ಇದಕ್ಕೆ ನಡಿಗೆದಾರರ ಸಂಘವು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರಿಂದ ಈ ಪ್ರಸ್ತಾವ ಕೈಬಿಟ್ಟಿತ್ತು. ಉದ್ಯಾನದಲ್ಲಿ ಯಾವುದೇ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಅನುಮತಿ ನೀಡಬಾರದು’ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಒತ್ತಾಯಿಸಿದರು.
‘ಇಡೀ ಬೆಂಗಳೂರು ನಗರಕ್ಕೆ ರಮಣೀಯವಾದ ಸ್ಥಳಗಳೆಂದರೆ ಲಾಲ್‌ಬಾಗ್ ಮತ್ತು ಕಬ್ಬನ್ ಉದ್ಯಾನಗಳು. ಇಲ್ಲಿರುವ ಮರಗಳು ಇಡೀ ನಗರಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ನಗರದ ಈ ಎರಡು ಉದ್ಯಾನಗಳನ್ನು ಸಂರಕ್ಷಿಸುವುದು ಸರ್ಕಾರ ಮತ್ತು ಸಾರ್ವಜನಿಕರ ಜವಾಬ್ದಾರಿ ಆಗಿದೆ’ ಎಂದರು.
‘ಖಾಸಗಿ ಕಲಾ ಕೇಂದ್ರಕ್ಕೆ ವಿರೋಧ’
ಕಬ್ಬನ್ ಉದ್ಯಾನದಲ್ಲಿ ಖಾಸಗಿ ಕಲಾ ಕೇಂದ್ರ ನಿರ್ಮಿಸುತ್ತಿರುವ ಸರ್ಕಾರ ಅವಕಾಶ ನೀಡಬಾರದು ಎಂದು ಸಂಸದ ಪಿ.ಸಿ. ಮೋಹನ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು ಕಬ್ಬನ್ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಕರ್ನಾಟಕ ಸರ್ಕಾರದ ಉದ್ಯಾನ ಸಂರಕ್ಷಣೆ ಕಾಯ್ದೆ 1975ರ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರವಾಗಿರುವ ಕಬ್ಬನ್ ಉದ್ಯಾನದ ಸಂರಕ್ಷಿಸಬೇಕು ಎಂದು ತಿಳಿಸಿದ್ದಾರೆ.
ಅಭಿಪ್ರಾಯ ಕಳುಹಿಸಿ
ಕಬ್ಬನ್ ಉದ್ಯಾನದಲ್ಲಿ ಖಾಸಗಿ ಕೇಂದ್ರ ನಿರ್ಮಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 50 ಪದಗಳ ಮಿತಿಯಲ್ಲಿ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬಹುದು. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ವಾಟ್ಸ್‌ಆ್ಯಪ್ ಸಂಖ್ಯೆ: 96060 38256
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.