ADVERTISEMENT

ನಡಿಗೆದಾರರ ಸಂಘಕ್ಕೆ ತರಾಟೆ

ಕಬ್ಬನ್‌ಪಾರ್ಕ್ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವಿಚಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 20:00 IST
Last Updated 6 ಜನವರಿ 2020, 20:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕಬ್ಬನ್‌ಪಾರ್ಕ್ ಆವರಣದಲ್ಲಿ ಏಳು ಅಂತಸ್ತಿನ ಹೈಕೋರ್ಟ್ ಅನೆಕ್ಸ್ ಕಟ್ಟಡ ನಿರ್ಮಾಣ ಪ್ರಸ್ತಾವನೆ ವಿರೋಧಿಸುತ್ತಿರುವವರನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ಹೈಕೋರ್ಟ್‌ನ ನೆಲಮಾಳಿಗೆಯಲ್ಲಿ400ಕ್ಕೂ ಅಧಿಕ ಸಿಬ್ಬಂದಿ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಇನಿತೂ ಕಾಳಜಿ ತೋರದವರು ಈಗ ಪರಿಸರದ ಹೆಸರಿನಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ’ ಎಂದು ಹೈಕೋರ್ಟ್‌ ಕಿಡಿ ಕಾರಿದೆ.

ಈ ಕುರಿತಂತೆ ‘ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಿಗೆ ಪ್ರಶ್ನೆಗಳ ಸುರಿಮಳೆಗೈದ ನ್ಯಾಯಪೀಠ, ‘2019ರ ನವೆಂಬರ್ 6ರಂದು ಹೈಕೋರ್ಟ್‌ನ ಫುಲ್‌ಕೋರ್ಟ್‌ (ಎಲ್ಲ ನ್ಯಾಯಮೂರ್ತಿಗಳನ್ನೂ ಒಳ
ಗೊಂಡ) ಸಭೆಯಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಸದ್ಯಕ್ಕೆ ಈಗಿರುವ ಪರಿಷತ್‌ ಕಚೇರಿಯಲ್ಲಿ ಅನೆಕ್ಸ್ ಕಟ್ಟಡ ಕಟ್ಟುವ ಪ್ರಸ್ತಾವನೆ ಇದೆ. ಇನ್ನೂ ಯಾವುದೇ ಆಖೈರು ತೀರ್ಮಾನ ಆಗಿಲ್ಲ’ ಎಂದರು.

‘ಪ್ರಸ್ತಾವನೆ ಹಂತದಲ್ಲೇ, ಮರ ಕಡಿಯಲಾಗುತ್ತದೆ. ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಹೇಗೆ ಊಹೆ ಮಾಡುತ್ತೀರಿ. ಕೋರ್ಟ್‌ನಲ್ಲಿ ಅರ್ಜಿ ಹಾಕುವುದಲ್ಲದೆ, ಹೊರಗಡೆಯೂ ಪ್ರತಿಭಟನೆ ಮಾಡುತ್ತೀರಿ. ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಲ್ಲವೇ’ ಎಂದರು.

‘ಈ ವರ್ಷದ ಮಾರ್ಚ್‌ ಅಂತ್ಯದ ಹೊತ್ತಿಗೆ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 50ಕ್ಕೆ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಈಗಿರುವ ಕಟ್ಟಡದಲ್ಲಿ ಎಲ್ಲ ನ್ಯಾಯಮೂರ್ತಿಗಳಿಗೂ ಕೋರ್ಟ್‌ ಹಾಲ್‌ಗಳು ಮತ್ತು ಅವರ ಛೇಂಬರ್‌ಗಳ ಕೊರತೆ ಬಾಧಿಸುತ್ತಿದೆ. ಅಷ್ಟೇಕೆ, ಈಗಿರುವ ಕಟ್ಟಡದ ನೆಲಮಾಳಿಗೆಯಲ್ಲಿ ಅನೇಕ ಕಚೇರಿಗಳಿವೆ. ಈ ಕಚೇರಿಗಳ ಸಿಬ್ಬಂದಿ, ಸೂಕ್ತ ಗಾಳಿ–ಬೆಳಕು ಇಲ್ಲದೆ ಅಮಾನವೀಯ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಕೇಳುವವರು ಯಾರು’ ಎಂದು ಖಾರವಾಗಿ ಪ್ರಶ್ನಿಸಿದರು.

‘ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಮುಂದಿನ ವಿಚಾರಣೆ ವೇಳೆಗೆ ತಿಳಿಸಬೇಕು’ ಎಂದು ಸರ್ಕಾರದ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ. ಅಂತೆಯೇ ಈ ವಿಚಾರಕ್ಕೆ ಸಂಬಂಧಿಸಿದ ಇನ್ನೂ ಎರಡು ಅರ್ಜಿಗಳ ವಿಚಾರಣೆಯನ್ನು ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.