ADVERTISEMENT

ಕಬ್ಬನ್‌ ಉದ್ಯಾನದ ಸೌಂದರ್ಯಕ್ಕೆ ಧಕ್ಕೆ ತಂದ ಕೊಳಚೆ ನೀರು: ಜಲಮೂಲಗಳು ಕಲುಷಿತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
<div class="paragraphs"><p>ಕಬ್ಬನ್‌ ಉದ್ಯಾನದಲ್ಲಿ ನಿರ್ಮಿಸಿರುವ ಕಲ್ಲಿನ ಸೇತುವೆಯಲ್ಲಿ ಸಂಗ್ರಹವಾಗಿರುವ ಹೂಳು. </p></div>

ಕಬ್ಬನ್‌ ಉದ್ಯಾನದಲ್ಲಿ ನಿರ್ಮಿಸಿರುವ ಕಲ್ಲಿನ ಸೇತುವೆಯಲ್ಲಿ ಸಂಗ್ರಹವಾಗಿರುವ ಹೂಳು.

   

–ಪ್ರಜಾವಾಣಿ ಚಿತ್ರಗಳು /ರಂಜು ಪಿ

ಬೆಂಗಳೂರು: ‘ಸಿಲಿಕಾನ್‌’ ಸಿಟಿ ಜನರ ನೆಚ್ಚಿನ ತಾಣವಾಗಿರುವ ಕಬ್ಬನ್‌ ಉದ್ಯಾನಕ್ಕೆ (ಜಯಚಾಮರಾಜೇಂದ್ರ ಒಡೆಯರ್‌ ಉದ್ಯಾನ) ಕೊಳಚೆ ನೀರು ಹರಿಯುತ್ತಿದ್ದು ಇದರಿಂದ, ಉದ್ಯಾನದಲ್ಲಿರುವ ಜಲಮೂಲಗಳು ಕಲುಷಿತಗೊಳ್ಳುತ್ತಿವೆ.

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಉದ್ಯಾನದ ವಿವಿಧ ಭಾಗಳಲ್ಲಿರುವ ಒಳಚರಂಡಿ ಮೂಲಕ ಕೊಳಚೆ ನೀರು ಉದ್ಯಾನಕ್ಕೆ ಹರಿದು ಬರುತ್ತಿದೆ. ಇಲ್ಲಿ ನಿರ್ಮಿಸಿರುವ ಕಲ್ಲಿನ ಸೇತುವೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ, ಬಾಟಲ್‌ ಸೇರಿದಂತೆ ಹೂಳು ಕಟ್ಟಿಕೊಂಡು ಈ ಪ್ರದೇಶವೆಲ್ಲ ಗೆಬ್ಬೆದ್ದು ನಾರುತ್ತಿದೆ. ಬಿದಿರು ಮೆಳೆಯ ಸುತ್ತಮುತ್ತ ನಿಂತಿರುವ ತ್ಯಾಜ್ಯ ನೀರಿನಿಂದ ಇಡೀ ಪರಿಸರ ದುರ್ನಾತ ಬೀರುತ್ತಿದೆ. ಈ ನೀರು ಬಿದಿರು ಮೆಳೆಯ ಮಾರ್ಗವಾಗಿ ಉದ್ಯಾನದ ಕೆರೆಗಳು, ಕಮಲದ ಕೊಳ ಮತ್ತು ಬಾಲಭವನದ ಪುಟಾಣಿ ಕೆರೆಗಳನ್ನು ತಲುಪುತ್ತಿದೆ.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ₹24 ಕೋಟಿ ವೆಚ್ಚದಲ್ಲಿ ಕಬ್ಬನ್‌ ಉದ್ಯಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಆದರೆ, ಈ ಕೊಳಚೆ ನೀರಿನ ಸಮಸ್ಯೆ ಮಾತ್ರ ಬಗೆಹರಿಸಿಲ್ಲ’ ಎಂದು ವಾಯುವಿಹಾರಿಗಳು ಆರೋಪಿಸಿದರು.

‘ಉದ್ಯಾನಕ್ಕೆ ಹರಿದು ಬರುವ ಕೊಳಚೆ ನೀರಿನ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೊಳಚೆ ನೀರಿನ ದುರ್ನಾತದಿಂದ ಮೂಗು ಮುಚ್ಚಿಕೊಂಡು ವಾಕಿಂಗ್‌ ಮಾಡುವ ಪರಿಸ್ಥಿತಿ ಇದೆ. ಉದ್ಯಾನದಲ್ಲಿರುವ ಹಳೆಯ ಯುಜಿಡಿ ಲೈನ್‌ ಬದಲಿಸಬೇಕು. ಕೂಡಲೇ ತ್ಯಾಜ್ಯ ನೀರು ಹರಿಯುತ್ತಿರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಾಯುವಿಹಾರಿ ಶ್ರೀಸುರೇಶ್ ಆಗ್ರಹಿಸಿದರು.

‘ಕಬ್ಬನ್‌ ಉದ್ಯಾನದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಅಡಿಯಲ್ಲಿ ಮಾಡಬೇಕಾದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಉದ್ಯಾನಕ್ಕೆ ಕೊಳಚೆ ನೀರು ಹರಿದು ಬರುತ್ತಿರುವುದನ್ನು ದುರಸ್ತಿಗೊಳಿಸಬೇಕೆಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ (ಬಿಡಬ್ಲ್ಯುಎಸ್‌ಎಸ್‌ಬಿ) ಪತ್ರ ಬರೆಯಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬ್ಬನ್‌ ಉದ್ಯಾನದ ಸುತ್ತಮುತ್ತಲು ಇರುವ ಕಟ್ಟಡಗಳ ತ್ಯಾಜ್ಯ ನೀರು ಉದ್ಯಾನಕ್ಕೆ ಹರಿಯುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಉದ್ಯಾನದ ಬಿದಿರು ಮೆಳೆ ಸುತ್ತ ಸಂಗ್ರಹವಾಗಿರುವ ತ್ಯಾಜ್ಯ ನೀರು.
ಉದ್ಯಾನದಲ್ಲಿರುವ ಕೆರೆಗೆ ತ್ಯಾಜ್ಯ ನೀರು ಹರಿದು ಕಲ್ಮಶವಾಗಿರುವುದು.

‘ಸ್ಮಾರ್ಟ್‌’ ಆಗದ ಉದ್ಯಾನ!

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ₹ 8 ಕೋಟಿ ವೆಚ್ಚದಲ್ಲಿ ಉದ್ಯಾನದಲ್ಲಿರುವ ಪ್ರೆಸ್‌ಕ್ಲಬ್ ಹೈಕೋರ್ಟ್‌ ಆವರಣ ಕೇಂದ್ರ ಗ್ರಂಥಾಲಯ ಸೇರಿದಂತೆ ಎಲ್ಲ ಪಾದಚಾರಿ ಮಾರ್ಗಗಳಿಗೆ ಹೊಸ ಫೇವರ್ಸ್‌ಗಳನ್ನು ಅಳವಡಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ‘ಉದ್ಯಾನದ ಒಳಭಾಗದ ಪಾದಚಾರಿ ಮಾರ್ಗಗಳಿಗೆ ಮಾತ್ರ ಹಳೆಯ ಪೇವರ್ಸ್‌ಗಳನ್ನು ಹಾಕಲಾಗಿದೆ. ಕೆಲವೊಂದು ಪಾದಚಾರಿ ಮಾರ್ಗಗಳಲ್ಲಿ ಬರೀ ಮಣ್ಣು ಹಾಕಿ ಹಾಗೆಯೇ ಬೀಡಲಾಗಿದೆ. ಇದು ಮಳೆಗಾಲದಲ್ಲಿ ರಸ್ತೆಯಲ್ಲ ಕೆಸರುಮಯವಾಗಿ ಓಡಾಡುವುದಕ್ಕೂ ತೊಂದರೆ ಆಗಲಿದೆ’ ಎಂದು ವಾಯುವಿಹಾರಿ ದೂರಿದರು.

‘ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಬಾಲಭವನವನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಆದರೆ ಕಬ್ಬನ್‌ ಉದ್ಯಾನದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ.
–ಎಸ್. ಉಮೇಶ ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ
ಕಬ್ಬನ್‌ ಉದ್ಯಾನದ ಪಾರಂಪರಿಕ ಸೌಂದರ್ಯ ಕಾಪಾಡುವುದರ ಜೊತೆಗೆ ಇಲ್ಲಿನ ಜಲಮೂಲಗಳ ರಕ್ಷಣೆ ಮಾಡಬೇಕು. ಜೊತೆಗೆ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
–ಶ್ರೀಸುರೇಶ್ ವಾಯುವಿಹಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.