ADVERTISEMENT

ಜುಲೈ 28ರಿಂದ ಎರಡು ದಿನ ತೇಜಸ್ವಿ ಸಾಂಸ್ಕೃತಿಕ ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:56 IST
Last Updated 25 ಜುಲೈ 2024, 15:56 IST
.
.   

ಬೆಂಗಳೂರು: ಮೂನಿಸ್ವಾಮಿ ಆ್ಯಂಡ್‌ ಸನ್ಸ್‌, ಎಂ. ಚಂದ್ರಶೇಖರ್ ಪ್ರತಿಷ್ಠಾನ, ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜುಲೈ 28 ಮತ್ತು  29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಹಬ್ಬ, ಸಮಗ್ರ ಪುಸ್ತಕ ಹಾಗೂ ಸಾಕ್ಷ್ಯಚಿತ್ರ ಸರಣಿ’ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಸಿ. ಶಿವಾರೆಡ್ಡಿ, ‘ಇಂದಿನ ಪೀಳಿಗೆಗೆ ತೇಜಸ್ವಿ ಅವರ ಬರಹಗಳನ್ನು ಪರಿಚಯಿಸುವ ಉದ್ದೇಶದಿಂದ ಅವರ ಸಮಗ್ರ ಕೃತಿ ಜಗತ್ತನ್ನು 14 ಸಂಪುಟಗಳನ್ನಾಗಿ ಸಂಪಾದಿಸಿ, ಪ್ರಕಟಿಸಲಾಗಿದೆ. ಇದೇ 29ರ ಸಂಜೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಸಾಹಿತಿ ಬಿ.ಎನ್. ಶ್ರೀರಾಮ್ ಅವರು ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸುವರು. ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹಗಳ ಕುರಿತ ಸಾಕ್ಷ್ಯಚಿತ್ರ ಸರಣಿ’ಯನ್ನು ಬಿಡುಗಡೆಗೊಳಿಸಲಿದ್ದಾರೆ’ ಎಂದರು.

ADVERTISEMENT

‘ಮಧ್ಯಾಹ್ನ 12.15ಕ್ಕೆ ‘ತೇಜಸ್ವಿ ಅವರ ಕಾಳಜಿಗಳು’ ಕುರಿತು ನಿವೃತ್ತ ಪ್ರಾಧ್ಯಾಪಕ ಮೊಗಳ್ಳಿ ಗಣೇಶ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ತೇಜಸ್ವಿ ಅವರ ಸಾಹಿತ್ಯದ ಕುರಿತು ಒಟ್ಟು ಐದು ಗೋಷ್ಠಿಗಳು ನಡೆಯಲಿವೆ. ಕುವೆಂಪು, ತೇಜಸ್ವಿ, ರಾಜಶ್ವರಿ ತೇಜಸ್ವಿ ಅವರ ಕುಟುಂಬ ಸದಸ್ಯರೊಂದಿಗೆ ಸಂವಾದವನ್ನೂ ಆಯೋಜಿಸಲಾಗಿದೆ’ ಎಂದು ವಿವರ ನೀಡಿದರು.

‘ಜುಲೈ 29ರಂದು ಮಧ್ಯಾಹ್ನ 12 ಗಂಟೆಗೆ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಪ್ರದರ್ಶನವಾಗಲಿದೆ. ತೇಜಸ್ವಿ ಅವರ ಸಾಹಿತ್ಯದ 14 ಸಂಪುಟಗಳು ಮಾರಾಟಕ್ಕಿದ್ದು, ವಿದ್ಯಾರ್ಥಿಗಳಿಗೆ ₹7 ಸಾವಿರ ಹಾಗೂ ಇತರರಿಗೆ ₹10 ಸಾವಿರದಂತೆ ಬೆಲೆ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಸಿ. ನರೇಂದ್ರ, ಎಚ್.ಬಿ. ದಿನೇಶ್, ಅರವಿಂದ ಮೋತಿ, ಅನು ಮೋತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.