ADVERTISEMENT

ಸಾಂಸ್ಕೃತಿಕ ಮುನ್ನೋಟ: ವಿವಿಧ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 23:31 IST
Last Updated 10 ಸೆಪ್ಟೆಂಬರ್ 2025, 23:31 IST
ಬಳ್ಕೂರು ಕೃಷ್ಣ ಯಾಜಿ
ಬಳ್ಕೂರು ಕೃಷ್ಣ ಯಾಜಿ    

ತಿತ್ತಿತ್ತೈ–ಯಕ್ಷ ಪರ್ವ 13ಕ್ಕೆ

ಬೆಂಗಳೂರು: ಟೀಮ್ ತಿತ್ತಿತ್ತೈ ವತಿಯಿಂದ ಇದೇ ಶನಿವಾರ ರಾತ್ರಿ 9.10ರಿಂದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ‘ತಿತ್ತಿತ್ತೈ–ಯಕ್ಷ ಪರ್ವ’ ಶೀರ್ಷಿಕೆಯಡಿ ಮೂರು ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 

‘ದಮಯಂತಿ ಪುನಃ ಸ್ವಯಂವರ’ ಪ್ರಥಮ ಪ್ರಸಂಗದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ಬಾಹುಕ), ಬಳ್ಕೂರು ಕೃಷ್ಣಯಾಜಿ (ಋತುಪರ್ಣ) ಪ್ರಮುಖ ಪಾತ್ರಗಳಲ್ಲಿ ರಂಗವೇರುತ್ತಾರೆ. ದಮಯಂತಿಯಾಗಿ ನೀಲ್ಕೋಡ್ ಶಂಕರ ಹೆಗಡೆ, ಸುದೇವ ಬ್ರಾಹ್ಮಣನಾಗಿ ಸಿದ್ಧಾಪುರ ಅಶೋಕ್ ಭಟ್, ಚೇದಿರಾಣಿಯಾಗಿ ಪಂಜು ಕುಮಾರ್ ಬಗ್ವಾಡಿ ಕಾಣಿಸಿಕೊಳ್ಳಲಿದ್ದಾರೆ. ಭಾಗವತಿಕೆಯಲ್ಲಿ ಕೊಳಗಿ ಕೇಶವ ಹೆಗಡೆ ಮತ್ತು ಮೂಡುಬೆಳ್ಳೆ, ವಾದ್ಯದಲ್ಲಿ ಫಾಟಕ್–ಕುಂಜತ್ತಾಯರು ಜೋಡಿಯಾಗಲಿದ್ದಾರೆ.

ADVERTISEMENT

‘ಭೃಗು ಶಾಪ’ ಪ್ರಸಂಗವನ್ನು ಶ್ರೀಧರ್ ಡಿ.ಎಸ್. ರಚಿಸಿದ್ದು, ಪ್ರಸಂಗದಲ್ಲಿ ವಿದ್ಯಾಧರ ಜಲವಳ್ಳಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಪ್ರದೀಪ್ ಸಾಮಗ, ವಿಶ್ವನಾಥ್ ಹೊನ್ನಾಬೈಲ್, ದಿನೇಶ್ ಶೆಟ್ಟಿ ಕಾವಳಕಟ್ಟೆ ಹಾಗೂ ಸೀತಾರಾಮ ಕುಮಾರ್ ಪಾತ್ರವಹಿಸಿದ್ದಾರೆ. 

ಮೂರನೆ ಪ್ರಸಂಗವಾದ ‘ಕೃಷ್ಣ ಸಂಕಲ್ಪ’ದಲ್ಲಿ ತೀರ್ಥಹಳ್ಳಿ ಗೋಪಾಲ್ ಆಚಾರ್ ಮತ್ತು ಕೊಳಲಿ ಕೃಷ್ಣ ಶೆಟ್ಟಿ ಅವರ ಜೋಡಿ ರಂಗವೇರಲಿದ್ದು, ಭಾಮಿನಿ ವೇಷ, ಪದ್ಯ–ಚಂಡೆಯ ಜುಗಲ್‌ಬಂದಿ ವಿಶೇಷ ಆಕರ್ಷಣೆಯಾಗಲಿದೆ. ಬೆಳಿಗ್ಗೆ 5.30ರವರೆಗೂ ಈ ಪ್ರದರ್ಶನಗಳು ನಡೆಯಲಿವೆ. ಟಿಕೆಟ್‌ಗಳು ಬುಕ್‌ ಮೈ ಶೊದಲ್ಲಿ ಲಭ್ಯವೆಂದು ಪ್ರಕಟಣೆ ತಿಳಿಸಿದೆ. 

ಸಂಪರ್ಕಕ್ಕೆ: 6362673283

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ

ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡವು ಇದೇ ಭಾನುವಾರ ಸಂಜೆ 5 ಗಂಟೆ ಮತ್ತು 7.30ಕ್ಕೆ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಆವರಣದಲ್ಲಿರುವ ಬಾನು ನೆನಪಿನ ನಾಣಿ ಅಂಗಳದಲ್ಲಿ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. 

ಈ ನಾಟಕವನ್ನು ಎಚ್. ಡುಂಡಿರಾಜ್ ಅವರು ರಚಿಸಿದ್ದು, ಅಶೋಕ್ ಬಿ. ನಿರ್ದೇಶಿಸಿದ್ದಾರೆ. ದಿನವಿಡೀ ಎಲ್ಲ ಟಿ.ವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿ, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ನಾಟಕ ಕಟ್ಟಿಕೊಡಲಿದೆ. ಸತತ ಒಂದೂವರೆ ಗಂಟೆಗಳ ಕಾಲದ ಈ ಪ್ರದರ್ಶನ, ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. 

ವಿವರಕ್ಕೆ: 9945977184 

13ಕ್ಕೆ ‘ರಾಮ ಶಾಮ ಡ್ರಾಮ’ 

ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಇದೇ 13ರಂದು ಸಂಜೆ 7 ಗಂಟೆಗೆ ಎನ್.ಆರ್. ಕಾಲೊನಿಯಲ್ಲಿರುವ ಡಾ.ಸಿ. ಅಶ್ವತ್ಥ್ ಕಲಾ ಭವನದಲ್ಲಿ ‘ರಾಮ ಶಾಮ ಡ್ರಾಮ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.  

ರಾಜೇಂದ್ರ ಕಾರಂತ ಅವರು ಈ ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ದೇವರೇ ಗತಿ ಆ್ಯಕ್ಸಿಡೆಂಟ್ ಆ್ಯಂಡ್ ಎಮರ್ಜೆನ್ಸಿ ಸೆಂಟರ್‌ನಲ್ಲಿ ಕೆಲಸ ಮಾಡುವ ವೈದ್ಯ ರಾಮ್, ಸಹಾಯಕ ಶಾಮ ಮತ್ತು ಸ್ವಾಗತಕಾರ ಭಾಮ ಹಾಗೂ ಚಿತ್ರ ವಿಚಿತ್ರ ಸಮಸ್ಯೆಗಳನ್ನು ಹೊತ್ತು ಆಸ್ಪತ್ರೆಗೆ ಬರುವ ರೋಗಿಗಳ ನಡುವೆ ನಡೆಯುವ ಹಾಸ್ಯ ಸನ್ನಿವೇಶಗಳೇ ನಾಟಕದ ಕಥಾವಸ್ತು. ಟಿಕೆಟ್‌ಗಳು ಬುಕ್‌ ಮೈ ಶೋನಲ್ಲಿ ಲಭ್ಯವೆಂದು ಪ್ರಕಟಣೆ ತಿಳಿಸಿದೆ. 

ವಿವರಕ್ಕೆ: 9945977184 

ಸಂಪ್ರದಾಯ ಉತ್ಸವ ನಾಳೆ

ಬೆಂಗಳೂರು: ನೃತ್ಯಾಂಗನಾ ಇನ್‌ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಇದೇ ಶುಕ್ರವಾರ ಸಂಜೆ 6 ಗಂಟೆಗೆ ಮಲ್ಲೇಶ್ವರದ ಸೇವಾ ಸದನದಲ್ಲಿ ‘ಸಂಪ್ರದಾಯ–ಎ ಫೆಸ್ಟಿವಲ್ ಆಫ್ ಡಾನ್ಸ್ ಟ್ರೆಡಿಷನ್ಸ್’ ಶೀರ್ಷಿಕೆಯಡಿ ನೃತ್ಯ ಸಂಭ್ರಮ ಹಮ್ಮಿಕೊಂಡಿದೆ. 

ಈ ಉತ್ಸವದಲ್ಲಿ ಕಲಾವಿದರಾದ ಸೌರವ್ ರಾಯ್ ಅವರು ಕಥಕ್, ಸರಿತಾ ಮಿಶ್ರಾ ಅವರು ಒಡಿಸ್ಸಿ ಹಾಗೂ ಸ್ವಪ್ನ ರಾಜೇಂದ್ರಕುಮಾರ್ ಅವರು ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಭರತನಾಟ್ಯಂ ನಿರ್ದೇಶಕಿ ಗಾಯತ್ರಿ ಕೇಶವನ್ ಹಾಗೂ ಸಾಹಿತಿ ಸುಧಾಕರನ್ ರಾಮಂತಳಿ ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. 

ಟಿಕೆಟ್‌ಗಳಿಗೆ: 8355996919 

ಬೆಂಗಳೂರು ಪುಸ್ತಕ ಉತ್ಸವ

ಬೆಂಗಳೂರು: ಭಾರತೀಯ ಮಾಲ್ ಆಫ್ ಬೆಂಗಳೂರು ಇದೇ 11ರಿಂದ 28ರವರೆಗೆ ಬೆಂಗಳೂರು ಪುಸ್ತಕ ಉತ್ಸವ ಹಮ್ಮಿಕೊಂಡಿದೆ.

ಥಣಿಸಂದ್ರ ಮುಖ್ಯ ರಸ್ತೆಯ ಭಾರತೀಯ ನಗರದಲ್ಲಿರುವ ಮಾಲ್‌ನಲ್ಲಿ ಈ ಉತ್ಸವ ನಡೆಯಲಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾವಿರಾರು ಪುಸ್ತಕಗಳು ಇರಲಿದ್ದು, ಹೆಸರಾಂತ ಲೇಖಕರ ಜತೆಗೆ ಸಂವಹನ ನಡೆಸಲೂ ಸಾಧ್ಯವಾಗಲಿದೆ. ಈ ಉತ್ಸವಕ್ಕೆ ಪ್ರವೇಶ ಉಚಿತವೆಂದು ಪ್ರಕಟಣೆ ತಿಳಿಸಿದೆ. 

ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.