ADVERTISEMENT

₹20 ಕೋಟಿ ಹೂಡಿಕೆ ವಂಚನೆ: ತನಿಖೆಗೆ ವಿಶೇಷ ತಂಡ; 4 ತಿಂಗಳಿನಲ್ಲಿ 1 ಸಾವಿರ ಪ್ರಕರಣ

* ಕಡಿಮೆ ಸಮಯದಲ್ಲಿ ದುಪ್ಪಟ್ಟು ಲಾಭದ ಆಮಿಷ * ನಾಲ್ಕು ತಿಂಗಳಿನಲ್ಲಿ 1 ಸಾವಿರ ಪ್ರಕರಣ

ಸಂತೋಷ ಜಿಗಳಿಕೊಪ್ಪ
Published 30 ಏಪ್ರಿಲ್ 2024, 20:14 IST
Last Updated 30 ಏಪ್ರಿಲ್ 2024, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಡಿಮೆ ಸಮಯದಲ್ಲಿ ದುಪ್ಪಟ್ಟು ಲಾಭ ಗಳಿಸಿ’ ಎಂಬ ಆಮಿಷವೊಡ್ಡಿ ಹೂಡಿಕೆ ಹೆಸರಿನಲ್ಲಿ ಜನರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ನಾಲ್ಕು ತಿಂಗಳಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಂಥ ಕೃತ್ಯ ಎಸಗುತ್ತಿರುವ ಜಾಲ ಭೇದಿಸಲು ಸಿಸಿಬಿ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿದೆ.

ಉದ್ಯಮಿಗಳು, ವ್ಯಾಪಾರಿಗಳು, ಖಾಸಗಿ ಕಂಪನಿ ಉದ್ಯೋಗಿಗಳು, ಸರ್ಕಾರಿ ನೌಕರರು ಹಾಗೂ ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ಹಣ ಇಟ್ಟಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಷೇರು ಮಾರುಕಟ್ಟೆ ಹಾಗೂ ಕ್ರಿಪ್ಟೊ ಕರೆನ್ಸಿ ಹೂಡಿಕೆ ವಂಚನೆಗೆ ಸಂಬಂಧಪಟ್ಟಂತೆ ನಗರದ ಕಾನೂನು ಸುವ್ಯವಸ್ಥೆ ಹಾಗೂ ಸೈಬರ್ ಕ್ರೈಂ ಠಾಣೆಗಳಲ್ಲಿ 2023ರ ಜನವರಿಯಿಂದ ಏಪ್ರಿಲ್ 30ರವರೆಗಿನ ಅವಧಿಯಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳ ತನಿಖೆ ನಡೆಸಿದ್ದ ಆಯಾ ಠಾಣೆ ಪೊಲೀಸರು, ‘ಇದೊಂದು ವ್ಯವಸ್ಥಿತ ಕೃತ್ಯ. ಬೇರೆಯವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಾಗೂ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಆರೋಪಿಗಳು ಕೃತ್ಯ ಎಸಗುತ್ತಿರುವ ಶಂಕೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಹೂಡಿಕೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಬಿ. ದಯಾನಂದ್, ಸಿಸಿಬಿಯ ಹೆಚ್ಚುವರಿ ಕಮಿಷನರ್ ಚಂದ್ರಗುಪ್ತ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ. ವಂಚನೆ ಮಾಡುತ್ತಿರುವವರು ಯಾರು? ಅವರ ಜಾಲದಲ್ಲಿ ಯಾರೆಲ್ಲ ಇದ್ದಾರೆ? ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

‘ಜನರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಲು ಯೋಚಿಸುತ್ತಿದ್ದಾರೆ. ಇಂಥ ಜನರನ್ನೇ ಗುರಿಯಾಗಿಸಿಕೊಂಡು ವಂಚಿಸುವ ಜಾಲ ಸಕ್ರಿಯವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರಸಕ್ತ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಸುಮಾರು ₹20 ಕೋಟಿ ವಂಚನೆಯಾಗಿರುವುದು ಗೊತ್ತಾಗಿದೆ. ಸಮಗ್ರ ತನಿಖೆ ನಡೆದ ಬಳಿಕ, ವಂಚನೆಯ ನಿಖರ ಮೊತ್ತ ತಿಳಿಯಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜನರ ಹೆಸರಿನಲ್ಲೇ ಬ್ಯಾಂಕ್ ಖಾತೆ: ‘ವಂಚನೆಯ ಹಿಂದೆ ವ್ಯವಸ್ಥಿತ ಜಾಲವಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಬಡವರಿಗೆ ಹಣದ ಆಮಿಷವೊಡ್ಡಿ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಅದೇ ದಾಖಲೆ ಬಳಸಿ, ಆನ್‌ಲೈನ್ ಮೂಲಕ ಹಲವು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

‘ಜನರನ್ನು ವಂಚಿಸಿ ಸಂಗ್ರಹಿಸುವ ಹಣವನ್ನು ಆರೋಪಿಗಳು, ಮೊದಲಿಗೆ ತಾವೇ ತೆರೆದಿರುತ್ತಿದ್ದ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ನಂತರ, ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ಡ್ರಾ ಮಾಡುತ್ತಿದ್ದಾರೆ. ಬ್ಯಾಂಕ್ ಖಾತೆ ವಿವರ ಆಧರಿಸಿ ಖಾತೆದಾರರನ್ನು ವಿಚಾರಣೆಗೆ ಒಳಪಡಿಸಿದಾಗ, ತಮಗೂ ಕೃತ್ಯಕ್ಕೂ ಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಯಾರೋ ದಾಖಲೆ ಪಡೆದು ತಮಗೂ ವಂಚಿಸಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ, ನೈಜ ಆರೋಪಿಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ’ ಎಂದು ವಿವರಿಸಿದರು.

ಆ್ಯಪ್‌ ಬಗ್ಗೆ ಮಾಹಿತಿ ಸಂಗ್ರಹ: ‘ಹೂಡಿಕೆ ವಂಚನೆಗೆ ಸಂಬಂಧಪಟ್ಟಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಪೂರ್ಣ ವಿವರಗಳನ್ನು ವಿಶೇಷ ತಂಡ ಸಂಗ್ರಹಿಸಿದೆ. ದೂರುದಾರರನ್ನು ಆರೋಪಿಗಳು ಯಾವ ರೀತಿ ಸಂಪರ್ಕಿಸಿದ್ದರು ಎಂಬ ಮಾಹಿತಿಯನ್ನಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮದ ಖಾತೆಗಳು ಹಾಗೂ ಆ್ಯಪ್‌ಗಳ ಬಗ್ಗೆಯೂ ವಿವರ ಪಡೆಯಲಾಗಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ದೂರುದಾರರು, ₹1 ಲಕ್ಷದಿಂದ ₹ 5 ಕೋಟಿಯವರೆಗೂ ಹಣ ಕಳೆದುಕೊಂಡಿದ್ದಾರೆ. ಯಾವೆಲ್ಲ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ? ದೂರುದಾರರನ್ನು ಸಂಪರ್ಕಿಸಲು ಆರೋಪಿಗಳು ಯಾವ ಮೊಬೈಲ್ ಸಂಖ್ಯೆ ಬಳಸಿದ್ದರು ಎಂಬ ಮಾಹಿತಿಯನ್ನು ವಿಶೇಷ ತಂಡ ಸಂಗ್ರಹಿಸುತ್ತಿದೆ. ಆದಷ್ಟು ಬೇಗ, ಜಾಲದ ಕೆಲ ಆರೋಪಿಗಳನ್ನು ಪತ್ತೆ ಮಾಡುವ ವಿಶ್ವಾಸವಿದೆ’ ಎಂದೂ ತಿಳಿಸಿದರು.

ಹೂಡಿಕೆ ವಂಚನೆ ಜಾಲ ಭೇದಿಸಲು ವಿಶೇಷ ತಂಡ ರಚಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಇಂಥ ವಂಚನೆಗಳ ಬಗ್ಗೆ ಜನರು ಜಾಗ್ರತೆ ವಹಿಸಬೇಕು. ಆಮಿಷಗಳಿಗೆ ಮಾರುಹೋಗಬಾರದು
ಚಂದ್ರಗುಪ್ತ ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ)

ಹೂಡಿಕೆ ವಂಚನೆ ಹೇಗೆ?

‘ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚು ಸಂಪಾದಿಸಿ’ ಎಂಬುದಾಗಿ ಆರೋಪಿಗಳು ಸಾಮಾಜಿಕ ಮಾಧ್ಯಮ ಹಾಗೂ ಆ್ಯಪ್‌ಗಳಲ್ಲಿ ಜಾಹೀರಾತು ನೀಡುತ್ತಾರೆ. ಕೆಲವರು ಸಾರ್ವಜನಿಕರ ಮೊಬೈಲ್‌ಗಳಿಗೂ ಸಾಮೂಹಿಕವಾಗಿ ಸಂದೇಶ ಕಳುಹಿಸುತ್ತಿದ್ದಾರೆ. ಅಂಥ ಸಂದೇಶ ನಂಬಿ ಜನರು ವಂಚನೆ ಜಾಲದೊಳಗೆ ಸಿಲುಕುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು. ‘ಜನರ ಮೊಬೈಲ್ ನಂಬರ್ ಪಡೆಯುವ ಆರೋಪಿಗಳು ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಆ್ಯಪ್‌ಗಳಲ್ಲಿರುವ ತಮ್ಮ ಗ್ರೂಪ್‌ಗಳಿಗೆ ಸೇರಿಸುತ್ತಿದ್ದಾರೆ. ‘ನನಗೆ ಇಂದು ಹೂಡಿಕೆಯಿಂದ ಲಕ್ಷ ಲಕ್ಷ ಲಾಭ ಬಂತು’ ಎಂಬುದಾಗಿ ಹೂಡಿಕೆದಾರರ ಸೋಗಿನಲ್ಲಿ ಆರೋಪಿಗಳೇ ಗ್ರೂಪ್‌ಗಳಲ್ಲಿ ಸಂದೇಶ ಕಳುಹಿಸುತ್ತಾರೆ. ಅದನ್ನು ನಂಬುವ ಜನ ಹೂಡಿಕೆ ಮಾಡಲು ಸಿದ್ಧರಾಗುತ್ತಿದ್ದಾರೆ. ಆರಂಭದಲ್ಲಿ ಸಾವಿರ ಹಾಗೂ ಲಕ್ಷದ ಲೆಕ್ಕದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.’ ‘ನಿಗದಿತ ದಿನದಂದು ಲಾಭದ ಬಗ್ಗೆ ಆರೋಪಿಗಳನ್ನು ವಿಚಾರಿಸಿದಾಗ ಮತ್ತಷ್ಟು ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಬರುವುದಾಗಿ ಪುನಃ ಆಮಿಷವೊಡ್ಡುತ್ತಿದ್ದಾರೆ. ಹೆಚ್ಚಿನ ಹಣ ಗಳಿಸುವ ಆಸೆಯಿಂದ ಜನರು ಪುನಃ ಹೂಡಿಕೆ ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಹಂತ ಹಂತವಾಗಿ ಹೂಡಿಕೆ ಮಾಡಿಸಿಕೊಂಡು ಆರೋಪಿಗಳು ನಾಪತ್ತೆಯಾಗುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ವಂಚನೆಯ ಕೆಲ ಪ್ರಕರಣಗಳು

* ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ಹೇಳಿ ನಗರದ ನಿವಾಸಿಯೊಬ್ಬರಿಂದ ₹5.18 ಕೋಟಿ ಪಡೆದು ವಂಚಿಸಲಾಗಿದ್ದು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

* ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ವೈದ್ಯರೊಬ್ಬರಿಂದ ₹90 ಲಕ್ಷ ಪಡೆದು ವಂಚಿಸಲಾಗಿದೆ.

1930 / 112 ಸೈಬರ್ ಕ್ರೈಂ ಸಹಾಯವಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.