ಬೆಂಗಳೂರು: ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ವತಿಯಿಂದ ಎನ್.ಆರ್. ಕಾಲೊನಿಯ ಶ್ರೀರಾಮ ಮಂದಿರದಲ್ಲಿ ಶನಿವಾರ ಸೈಬರ್ ಅಪರಾಧಗಳನ್ನು ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾರ್ಯಾಗಾರ ನಡೆಯಿತು.
ಸೈಬರ್ ಅಪರಾಧ ತಡೆ ಕುರಿತ ಭಿತ್ತಿ ಫಲಕಗಳನ್ನು ಪ್ರದರ್ಶಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರವಿಸುಬ್ರಮಣ್ಯ, ‘ಯಾವುದೇ ಬ್ಯಾಂಕ್‌ನಲ್ಲಿ ಎರಡು ಖಾತೆಗಳನ್ನು ನಿರ್ವಹಿಸಿ, ಒಂದು ಖಾತೆಯನ್ನು ಕನಿಷ್ಠ ಮೊತ್ತದಲ್ಲಿ ವ್ಯವಹರಿಸಬೇಕು ಹಾಗೂ ಮತ್ತೊಂದು ಖಾತೆಯ ವ್ಯವಹಾರದ ಬಗ್ಗೆ ಗೋಪ್ಯತೆ ಕಾಪಾಡಬೇಕು’ ಎಂದು ಸಲಹೆ ನೀಡಿದರು.
ಸುಶಿಕ್ಷಿತ ಜನರು, ಹಿರಿಯರು, ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಸರ್ಕಾರಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಸೈಬರ್ ಅಪರಾಧ ವಿಭಾಗವನ್ನು ಆಧುನೀಕರಣಗೊಳಿಸಬೇಕು. ಸಹಕಾರ ಬ್ಯಾಂಕ್‌ಗಳಲ್ಲಿ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ಮಾಡಿದರು.
ಬನಶಂಕರಿ ಸೈಬರ್ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ವಿಜಯ್ ಹಡಗಲಿ ಅವರು ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿದರು.
ಸಿಐಡಿ ಘಟಕದ ಸೈಬರ್ ಅಪರಾಧ ವಿಭಾಗದ ಡಿವೈಎಸ್‌ಪಿ ಕೆ.ಎನ್. ಯಶವಂತ್ ಕುಮಾರ್ ಅವರು ವಿವಿಧ ರೀತಿಯ ಅಪರಾಧಗಳು ಮತ್ತು ಅವುಗಳ ತಡೆಗೆ ವಹಿಸಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.
ವಿವಿಧ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸೊಸೈಟಿಗಳ ನಿರ್ದೇಶಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.