ADVERTISEMENT

ವಂಚಕರಿಗೆ ಸಿಮ್ ಕಾರ್ಡ್ ಪೂರೈಸುತ್ತಿದ್ದವ ಬಂಧನ

₹ 10 ಸಾವಿರದಿಂದ ₹ 15 ಸಾವಿರಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 22 ಮೇ 2022, 19:50 IST
Last Updated 22 ಮೇ 2022, 19:50 IST
ಸ್ಯಾಮುಯಲ್
ಸ್ಯಾಮುಯಲ್   

ಬೆಂಗಳೂರು: ಸೈಬರ್ ಅಪರಾಧ ಎಸಗಿ ಜನರ ಹಣ ದೋಚುತ್ತಿದ್ದವರಿಗೆ ಸಿಮ್‌ ಕಾರ್ಡ್ ಹಾಗೂ ಬ್ಯಾಂಕ್‌ ಖಾತೆ ವಿವರಗಳನ್ನು ಒದಗಿಸುತ್ತಿದ್ದಆರೋಪದಡಿ ಸ್ಯಾಮುಯಲ್ ಒಕೋನ್ (26)ನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಫ್ರಿಕಾ ಖಂಡದ ಘನಾ ದೇಶದಸ್ಯಾಮುಯಲ್, ಉದ್ಯೋಗ ವೀಸಾದಡಿ 4 ವರ್ಷದ ಹಿಂದೆ ಬಂದಿದ್ದು, ವೀಸಾ ಅವಧಿ ಮುಗಿದರೂ ವಾಪಸಾಗಿರಲಿಲ್ಲ. ಈತನಿಂದ 5 ಸಿಮ್‌ಕಾರ್ಡ್‌, ವಿವಿಧ ಬ್ಯಾಂಕ್‌ಗಳ 6 ಡೆಬಿಟ್ ಕಾರ್ಡ್‌ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

‘ಲಾಟರಿ, ಉಡುಗೊರೆ ಆಮಿಷವೊಡ್ಡಿ ಜನರಿಗೆ ಕರೆ ಮಾಡಿ ವಂಚಿಸುವವರಿಗೆ ಆರೋಪಿ, ಸಿಮ್‌ಕಾರ್ಡ್‌ಗಳನ್ನು ₹ 10 ಸಾವಿರದಿಂದ ₹ 15 ಸಾವಿರಕ್ಕೆ ಮಾರುತ್ತಿದ್ದ. ಸಾರ್ವಜನಿಕರ ಹಣ ವರ್ಗಾವಣೆಗೆ ಬ್ಯಾಂಕ್ ಖಾತೆಯ ವಿವರಗಳನ್ನೂ ನೀಡುತ್ತಿದ್ದ’ ಎಂದರು.

ADVERTISEMENT

ಈಶಾನ್ಯ ರಾಜ್ಯ ಜನರಿಗೆ ಆಮಿಷ: ‘ತ್ರಿಪುರ, ಅಸ್ಸಾಂ, ನಾಗಾಲ್ಯಾಂ‍ಡ್‌ ಸೇರಿ ಈಶಾನ್ಯ ರಾಜ್ಯಗಳ ಜನರಿಗೆ ಆಮಿಷ ವೊಡ್ಡಿ ವೈಯಕ್ತಿಕ ದಾಖಲೆ ಪಡೆಯುತ್ತಿದ್ದು, ಅದನ್ನು ಆಧರಿಸಿ ಸಿಮ್‌ಕಾರ್ಡ್ ಖರೀದಿಸುತ್ತಿದ್ದ. ಜೊತೆಗೆ, ಬ್ಯಾಂಕ್‌ಗಳಲ್ಲೂ ಖಾತೆಗಳನ್ನು ತೆರೆಯುತ್ತಿದ್ದ. ಇದೇ ಸಿಮ್‌ಕಾರ್ಡ್ ಹಾಗೂ ಬ್ಯಾಂಕ್‌ ಖಾತೆಗಳ ವಿವರವನ್ನು ವಂಚಕರಿಗೆ ಮಾರುತ್ತಿದ್ದ’ ಎಂದೂ ತಿಳಿಸಿದರು.

‘ಸೈಬರ್ ಅಪರಾಧ ಕುರಿತಂತೆ ಇತ್ತೀಚೆಗೆ ಪ್ರಕರಣವೊಂದರ ತನಿಖೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಸ್ಯಾಮುಯಲ್‌ನನ್ನು ಬಂಧಿಸಲಾಗಿದೆ. ಆತನಿಂದ ಸಿಮ್‌ ಕಾರ್ಡ್‌ ಪಡೆಯುತ್ತಿದ್ದ ವಂಚಕರ ಬಗ್ಗೆ ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

₹ 4.40 ಲಕ್ಷ ಮೌಲ್ಯ ಡ್ರಗ್ಸ್ ಜಪ್ತಿ
ಬೆಂಗಳೂರು:
ಈಶಾನ್ಯ ವಿಭಾಗದ ಪೊಲೀಸರುಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ತಿರುಮೇನಹಳ್ಳಿ ಬಳಿ ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾ ಪ್ರಜೆ ಜೆರ್ರಿ (35) ಎಂಬಾತನನ್ನು ಬಂಧಿಸಿದ್ದು, ಆತನಿಂದ ₹ 4.40 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘₹ 4 ಲಕ್ಷ ಮೌಲ್ಯದ 80 ಗ್ರಾಂ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ.ವೀಸಾ ಅವಧಿ ಮುಗಿದರೂ ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ನೆಲೆಸಿದ್ದ. ಹೊರ ರಾಜ್ಯಗಳಿಂದ ಡ್ರಗ್ಸ್ ತರಿಸಿ ಮನೆಯಲ್ಲೇ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ’ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

‘ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರುತ್ತಿದ್ದ. ಮನೆ ಮೇಲೂ ದಾಳಿ ನಡೆಸಿ, ಮೊಬೈಲ್, ತೂಕದ ಯಂತ್ರ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ಯಲಹಂಕದಲ್ಲಿ ಕಾರ್ಯಾಚರಣೆ: ‘ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪಿ ರುವಾಂಡ ದೇಶದ ನ್ಹೂಸೆ ಇವ್ರಾ ಜಾರ್ಜ್ (34) ಹಾಗೂ ಶಿವಾಜಿನಗರದ ಮೊಹಮ್ಮದ್ ಫಾರೂಕ್ ಅಲಿಯಾಸ್ ಅಬ್ದುಲ್‌ನನ್ನು (29) ಬಂಧಿಸಲಾಗಿದೆ’ ಎಂದು ಡಿಸಿಪಿ ತಿಳಿಸಿದರು.

‘ಇವರಿಂದ ₹ 40 ಸಾವಿರ ಮೌಲ್ಯದ 8 ಗ್ರಾಂ ಎಂಡಿಎಂಎ, ₹ 25 ಸಾವಿರ ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.