ADVERTISEMENT

ರಾಜಸ್ಥಾನದಲ್ಲಿ ಸಿಕ್ಕಿಬಿದ್ದ ಸೈಬರ್ ವಂಚಕರು

ಐಪಿಎಸ್, ಐಎಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ

ಸಂತೋಷ ಜಿಗಳಿಕೊಪ್ಪ
Published 19 ಅಕ್ಟೋಬರ್ 2020, 20:43 IST
Last Updated 19 ಅಕ್ಟೋಬರ್ 2020, 20:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಪ್ರಮುಖರ ಫೋಟೊ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರಿಗೆ ಹಣ ವಂಚಿಸಿದ್ದ ಜಾಲವನ್ನು ಸಿಐಡಿ ಸೈಬರ್ ವಿಭಾಗದ ಪೊಲೀಸರು ಭೇದಿಸಿದ್ದಾರೆ.

‘ಎರಡು– ಮೂರು ತಿಂಗಳಿನಿಂದ ಈ ಕೃತ್ಯ ಎಸಗುತ್ತಿದ್ದ ರಾಜಸ್ಥಾನ್‌ದ ಭರತ್‌ಪುರ ನಿವಾಸಿ ಸದ್ದಾಂ, ಅನ್ಸರ್ ಹಾಗೂ ಅವರಿಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರನ್ನು ನಗರಕ್ಕೆ ಕರೆತಂದು ನ್ಯಾಯಾಲಯದ ಎದುರು ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಜಾಲದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಭರತ್‌ಪುರದಲ್ಲಿ ಮೊಬೈಲ್ ಮಳಿಗೆ ಇಟ್ಟುಕೊಂಡಿದ್ದ ಆರೋಪಿ, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಯುವಕರನ್ನು
ಸೇರಿಸಿಕೊಂಡು ಗ್ಯಾಂಗ್ ಮಾಡಿಕೊಂಡಿದ್ದ. ಅವರ ಮೂಲಕವೇ ನಕಲಿ ಖಾತೆಗಳನ್ನು ಸೃಷ್ಟಿಸಿ ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದ್ದ’.

ADVERTISEMENT

‘ಸಾಮಾಜಿಕ ಜಾಲತಾಣಗಳಲ್ಲಿರುವ ಐಎಎಸ್, ಐಪಿಎಸ್ ಅಧಿಕಾರಿಗಳ ಖಾತೆಯಿಂದ ಅವರ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ನಕಲಿ ಖಾತೆಗಳನ್ನು ತೆರೆಯುತ್ತಿದ್ದರು. ಅದರಿಂದಲೇ ಅಧಿಕಾರಿಗಳ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ನಂತರ, ‘ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ನಿಮ್ಮಿಂದ ಹಣದ
ಸಹಾಯ ಬೇಕು’ ಎಂದು ಸಂದೇಶ ರವಾನಿಸುತ್ತಿದ್ದರು. ನಕಲಿ ದಾಖಲೆಗಳನ್ನು ಕೊಟ್ಟು ರಾಜಸ್ಥಾನದ ಬ್ಯಾಂಕ್‌ಗಳಲ್ಲಿ ತೆರೆದಿದ್ದ ಖಾತೆ ಸಂಖ್ಯೆಗಳನ್ನು ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಆರಂಭದಲ್ಲಿ ಪಿಎಸ್‌ಐಯೊಬ್ಬರ ಫೋಟೊ ಬಳಸಿಕೊಂಡು ನಕಲಿ ಖಾತೆ ತೆರೆದಿದ್ದ ಆರೋಪಿಗಳು, ಅವರ ಹೆಸರಿನಲ್ಲಿ ಸ್ನೇಹಿತರಿಂದ ಹಣ ಪಡೆದುಕೊಂಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಪಿಎಸ್ಐ, ಸೈಬರ್ ಠಾಣೆಗೆ ದೂರು ನೀಡಿದ್ದರು.’

‘ಐಪಿಎಸ್ ಅಧಿಕಾರಿಗಳಾದ ಪಿ. ಹರಿಶೇಖರನ್, ಚಂದ್ರಗುಪ್ತ, ಡಿವೈಎಸ್ಪಿ ಎಂ.ಎಚ್. ನಾಗ್ಟೆ, ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು, ಹೀಗೆ ಹಲವರ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು’ ಎಂದೂ ಮೂಲಗಳು ಹೇಳಿವೆ.

ಡಿಜಿ–ಐಜಿ ಪ್ರವೀಣ್ ಸೂದ್ ಹೆಸರಿನಲ್ಲೂ ನಕಲಿ ಖಾತೆ?

‘ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿ) ಪ್ರವೀಣ್ ಸೂದ್ ಹಾಗೂ ಕೆಲ ಎಡಿಜಿಪಿಗಳ ಹೆಸರಿನಲ್ಲೂ ಆರೋಪಿಗಳು ನಕಲಿ ಖಾತೆ ತೆರೆದಿದ್ದರು. ಅವರ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ತಮಿಳುನಾಡಿನ ಕೆಲ ಅಧಿಕಾರಿಗಳ ಹೆಸರಿನಲ್ಲೂ ಆರೋಪಿಗಳು ವಂಚಿಸಿದ್ದಾರೆ’ ಎಂದೂ ತಿಳಿಸಿವೆ.

ರಾಜಸ್ಥಾನದಲ್ಲಿ ಮೊಕ್ಕಾಂ ಹೂಡಿದ್ದ ಸಿಐಡಿ

ಆರೋಪಿಗಳ ಜಾಡು ಹಿಡಿದು ರಾಜಸ್ಥಾನಕ್ಕೆ ಹೋಗಿದ್ದ ಸಿಐಡಿ ಸೈಬರ್ ವಿಭಾಗದ ಡಿವೈಎಸ್ಪಿ ನೇತೃತ್ವದ ತಂಡ, ಒಂದು ವಾರ ಅಲ್ಲಿಯೇ ಮೊಕ್ಕಾಂ ಹೂಡಿತ್ತು.

‘ಆರಂಭದಲ್ಲಿ ಒಬ್ಬನನ್ನು ಮಾತ್ರ ಬಂಧಿಸಲಾಗಿತ್ತು. ಉಳಿದವರು ತಲೆಮರೆಸಿಕೊಂಡಿದ್ದರು. ಅಲ್ಲಿನ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಹುಡುಕಾಡಿ ಮೂವರನ್ನು ಸೆರೆಹಿಡಿಯಲಾಯಿತು’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.