ADVERTISEMENT

ಮಾಂಟ್‌ಗೊಮೆರಿ ಕಾಲೇಜಿನ ಜತೆ ಎಸ್‌ಜೆಪಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 20:07 IST
Last Updated 25 ಅಕ್ಟೋಬರ್ 2021, 20:07 IST
ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟ್‌ಗೊಮೆರಿ ಕೌಂಟಿ ಸಮುದಾಯ ಕಾಲೇಜಿನ ಸಯೋಗದಲ್ಲಿ ಬೆಂಗಳೂರಿನ ಎಸ್‌.ಜೆ. ಪಾಲಿಟೆಕ್ನಿಕ್‌ನಲ್ಲಿ ಪ್ರಾರಂಭವಾಗಲಿರುವ ಹೊಸ ಕೋರ್ಸ್‌ಗಳ ಪ್ರವೇಶಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪಿ., ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್‌ ನಾಯಕ್‌
ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟ್‌ಗೊಮೆರಿ ಕೌಂಟಿ ಸಮುದಾಯ ಕಾಲೇಜಿನ ಸಯೋಗದಲ್ಲಿ ಬೆಂಗಳೂರಿನ ಎಸ್‌.ಜೆ. ಪಾಲಿಟೆಕ್ನಿಕ್‌ನಲ್ಲಿ ಪ್ರಾರಂಭವಾಗಲಿರುವ ಹೊಸ ಕೋರ್ಸ್‌ಗಳ ಪ್ರವೇಶಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪಿ., ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್‌ ನಾಯಕ್‌   

ಬೆಂಗಳೂರು: ವೃತ್ತಿಪರ ಶಿಕ್ಷಣದಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕಾಗಿ (ಟ್ವಿನ್ನಿಂಗ್‌) ನಗರದ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟ್‌ಗೊಮೆರಿ ಕೌಂಟಿ ಸಮುದಾಯ ಕಾಲೇಜಿನ ಜತೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪಾಲಿಟೆಕ್ನಿಕ್‌ನಲ್ಲಿ ಎರಡು ಹೊಸ ಕೋರ್ಸ್‌ಗಳು ಆರಂಭವಾಗಲಿವೆ.

ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ‘ಮೂರು ವರ್ಷಗಳ ಅವಧಿಯ ಪ್ರವಾಸೋದ್ಯಮ– ಆತಿಥ್ಯೋದ್ಯಮ ಹಾಗೂ ಸೈಬರ್‌ ಭದ್ರತೆ ಡಿಪ್ಲೊಮಾ ಕೋರ್ಸ್‌ಗಳನ್ನು ಎಸ್‌ಜೆಪಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತಿದೆ. ಎರಡೂ ಕೋರ್ಸ್‌ಗಳಲ್ಲಿ ತಲಾ 24 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಮೊದಲ ವರ್ಷ ಸ್ಥಳೀಯವಾಗಿ ಕಲಿಯಲಿದ್ದಾರೆ. ಎರಡನೇ ವರ್ಷ ಮಾಂಟ್‌ಗೊಮೆರಿ ಕಾಲೇಜಿನ ಪ್ರಾಧ್ಯಾಪಕರು ಆನ್‌ಲೈನ್‌ ಮೂಲಕ ಬೋಧಿಸಲಿದ್ದಾರೆ. ಮೂರನೇ ವರ್ಷ ವಿದ್ಯಾರ್ಥಿಗಳು ಮಾಂಟ್‌ಗೊಮೆರಿ ಕಾಲೇಜಿಗೆ ತೆರಳಿ ವ್ಯಾಸಂಗ ಮಾಡುತ್ತಾರೆ’ ಎಂದರು.

ಪ್ರತಿ ವಿದ್ಯಾರ್ಥಿಗೂ ತಲಾ ₹ 20 ಲಕ್ಷ ವೆಚ್ಚವಾಗಲಿದೆ. ಅದನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಅಮೆರಿಕಕ್ಕೆ ತೆರಳಿದ ಬಳಿಕ ವಿದ್ಯಾರ್ಥಿಗಳು 12 ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಾರೆ. ಮೂರು ವರ್ಷಗಳ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಎಲ್ಲ ವಿದ್ಯಾರ್ಥಿಗಳಿಗೂ ಅಮೆರಿಕದಲ್ಲೇ ಉದ್ಯೋಗ ದೊರೆಯಲಿದೆ. ವಾರ್ಷಿಕ ₹ 25 ಲಕ್ಷದಿಂದ ₹ 30 ಲಕ್ಷದವರೆಗೂ ವೇತನ ಸಿಗಲಿದೆ. ಉದ್ಯೋಗ ನೀಡುವುದಕ್ಕಾಗಿ 30 ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಎಸ್‌ಜೆಪಿಯಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಹಾಡಲಿದೆ ಎಂದು ಹೇಳಿದರು.

48 ಮಂದಿ ಆಯ್ಕೆ

ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪಡೆದಿರುವ ಅತಿಹೆಚ್ಚು ಅಂಕಗಳನ್ನು ಪಡೆದಿರುವ 5,000 ವಿದ್ಯಾರ್ಥಿಗಳಲ್ಲಿ 48 ಮಂದಿಯನ್ನು ಪ್ರವಾಸೋದ್ಯಮ –ಆತಿಥ್ಯೋದ್ಯಮ ಹಾಗೂ ಸೈಬರ್‌ ಭದ್ರತೆ ಡಿಪ್ಲೊಮಾ ಕೋರ್ಸ್‌ ಪ್ರವೇಶಕ್ಕೆ ಆಯ್ಕೆ ಮಾಡಲಾಗಿದೆ.

ಈ ಕೋರ್ಸ್‌ಗಳಿಗೆ ಆಯ್ಕೆಯಾಗಿರುವ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ನವೀನ್, ಹೊಸದುರ್ಗದ ಟಿ.ಎ.ತರುಣ್ ಮತ್ತು ಮಂಡ್ಯದ ಎಸ್.ಎನ್.ಧನುಷ್ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.