ಬೆಂಗಳೂರು: ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ಮೊಬೈಲ್ ಫೋನ್ ಉಡುಗೊರೆಯಾಗಿ ಕಳುಹಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ ₹2.8 ಕೋಟಿ ದೋಚಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಹೆಸರಿನಲ್ಲಿ ಮೊಬೈಲ್ ಫೋನ್ ಕಳುಹಿಸಿ ವಂಚಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ವ್ಯಕ್ತಿ ನೀಡಿದ ದೂರು ಆಧರಿಸಿ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಂಚಕರು ಕಳಿಸಿದ್ದ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು, ಹಣ ವರ್ಗಾವಣೆಯಾದ ಖಾತೆಗಳ ವಿವರ ಕಲೆಹಾಕುತ್ತಿದ್ದಾರೆ.
‘ನವೆಂಬರ್‌ನಲ್ಲಿ ಟೆಕಿಗೆ ಕರೆ ಮಾಡಿದ್ದ ವಂಚಕರು, ‘ನಿಮ್ಮ ರಿವಾರ್ಡ್ ಪಾಯಿಂಟ್ಸ್ ಉತ್ತಮವಾಗಿದೆ. ಕ್ರೆಡಿಟ್ ಕಾರ್ಡ್ ಆಫರ್ ಮಾಡುತ್ತಿದ್ದೇವೆ’ ಎಂದಿದ್ದರು. ಬಳಿಕ ಹೊಸ ಸಿಮ್ ಕಾರ್ಡ್ ಖರೀದಿಸಿ ಅದರ ನಂಬರ್ ನೀಡಲುತಿಳಿಸಿದ್ದರು. ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ದೂರುದಾರರ ವಿಳಾಸಕ್ಕೆ ತಾವೇ ಹೊಸ ಮೊಬೈಲ್ ಫೋನ್ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ವಂಚಕರು ಕಳುಹಿಸಿದ್ದ ಮೊಬೈಲ್ ಫೋನ್‌ಗೆ ಟೆಕಿ ತಾವು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲಾರಂಭಿಸಿದ್ದಾರೆ. ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುತ್ತಿದ್ದಂತೆ ಮೊದಲೇ ಕ್ಲೋನಿಂಗ್ ಮತ್ತು ಆ್ಯಪ್ ಹಾಕಿದ್ದ ವಂಚಕರು, ಬ್ಯಾಂಕ್‌ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್‌ನಲ್ಲಿ ಸೆಟ್ ಮಾಡಿಟ್ಟಿದ್ದರು. ವಾರದ ಬಳಿಕ ತಮ್ಮ ನಿಶ್ಚಿತ ಠೇವಣಿ (ಎಫ್.ಡಿ) ಖಾತೆಯಲ್ಲಿ ಹಣ ಕಡಿತ ಆಗಿರುವುದನ್ನು ಗಮನಿಸಿದ ದೂರುದಾರರು, ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಹಣ ವಂಚಕರ ಪಾಲಾಗಿರುವುದು ಗೊತ್ತಾಗಿದೆ’ ಎಂದು ಹೇಳಿದರು.
‘ವಂಚನೆ ಉದ್ದೇಶದಿಂದ ಆ್ಯಪ್ಗಳನ್ನು ಮೊಬೈಲ್ಗಳಲ್ಲಿ ಇನ್ಸ್ಟಾಲ್ ಮಾಡಿ ಅವುಗಳನ್ನೇ ವಂಚಕರು ಬ್ಯಾಂಕ್ ಹೆಸರಲ್ಲಿ ಜನರಿಗೆ ಉಡುಗೊರೆ ಕಳುಹಿಸುತ್ತಾರೆ. ಆ ಮೊಬೈಲ್‌ಗೆ ಸಿಮ್ ಹಾಕಿದಂತೆ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಾರೆ. ಹಣ ಕಡಿತವಾದ ಸಂದೇಶ ಬರದಂತೆ ಮಾಡುತ್ತಾರೆ’ ಎಂದರು.
ಉಚಿತ ಕೊಡುಗೆ ಬಗ್ಗೆ ಎಚ್ಚರ: ಡಿಸಿಪಿ
ಅಪರಿಚಿತ ವ್ಯಕ್ತಿಗಳು ಕಳುಹಿಸುವ ಯಾವುದೇ ಉಚಿತ ಕೊಡುಗೆಗಳನ್ನು ಬಳಸಬಾರದು. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
‘ಸೈಬರ್ ವಂಚಕರು ಮೊಬೈಲ್ ಕಳುಹಿಸಿ ನಿರಂತರವಾಗಿ ಫೋನ್‌ನಲ್ಲಿ ಸಂಪರ್ಕದಲ್ಲಿರುತ್ತಾರೆ. ಫೋನ್‌ಗೆ ಸಿಮ್ ಕಾರ್ಡ್ ಹಾಕುವಂತೆ ಹೇಳಿ ಅದರಲ್ಲಿ ಬರುವಂತಹ ಮಾಹಿತಿ ಅಪ್‌ಲೋಡ್ ಮಾಡುವಂತೆ ಸೂಚಿಸುತ್ತಾರೆ. ಮಾಹಿತಿ ರವಾನೆ ಮಾಡುತ್ತಿದ್ದಂತೆ ಫೋನ್ ಕ್ಲೋನ್ ಆಗಿರುವುದರಿಂದ ಬ್ಯಾಂಕ್‌ನಿಂದ ಬರುವ ಒಟಿಪಿ ವಂಚಕರಿಗೆ ಹೋಗಿ ಹಣ ಕಳೆದುಕೊಳ್ಳುತ್ತೀರಿ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.