ADVERTISEMENT

ಬೆಂಗಳೂರು | ಅಡುಗೆ ಅನಿಲ ಸಿಲಿಂಡರ್‌ ಸ್ಫೋಟ: ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 15:27 IST
Last Updated 16 ಮಾರ್ಚ್ 2024, 15:27 IST
-
-   

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ನಾಲ್ವರು ಗಾಯಗೊಂಡ ಘಟನೆ ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಳ್ಳಹಳ್ಳಿ ಜಂಕ್ಷನ್‌ನಲ್ಲಿ ನಡೆದಿದೆ.

ಗಾಯಾಳು, ಹೆಗಡೆನಗರ ನಿವಾಸಿ ಶೇಕ್ ನವೀದ್‌ ಅವರು ನೀಡಿದ ದೂರಿನ ಮೇರೆಗೆ ತಳ್ಳುವ ಗಾಡಿ ಮಾಲೀಕ ಇನಾಯತ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇನಾಯತ್‌, ಬೆಳ್ಳಹಳ್ಳಿ ಜಂಕ್ಷನ್‌ನಲ್ಲಿ ತಳ್ಳುವ ಗಾಡಿಯಲ್ಲಿ ಫಾಸ್ಟ್‌ ಫುಡ್‌ ವ್ಯಾಪಾರ ನಡೆಸುತ್ತಿದ್ದಾರೆ. ಮಾರ್ಚ್‌ 12ರಂದು ಬೆಳಿಗ್ಗೆ ಅಡುಗೆ ಅನಿಲದ ಸಿಲಿಂಡರ್‌ ತಂದು ತಮ್ಮ ಗಾಡಿ ಪಕ್ಕದಲ್ಲಿ ಇರಿಸಿ ಇನ್ನೊಂದು ಸಿಲಿಂಡರ್‌ ತರಲು ತೆರಳಿದ್ದರು. ಇದೇ ಸಮಯಕ್ಕೆ ಶೇಕ್‌ ನವೀದ್‌ ತಮ್ಮ ದ್ವಿಚಕ್ರ ವಾಹನದಲ್ಲಿ ಜಂಕ್ಷನ್‌ ಕಡೆಯಿಂದ ಹೆಗಡೆನಗರದ ಕಡೆಗೆ ತೆರಳುತ್ತಿದ್ದರು. ಈ ವೇಳೆ, ತಳ್ಳುವ ಗಾಡಿ ಬಳಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು ಕಾಣಿಸಿದೆ. ತಕ್ಷಣ ಬೈಕ್‌ ನಿಲ್ಲಿಸಿ, ಮ್ಯಾಟ್‌ ತೆಗೆದುಕೊಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ.

ADVERTISEMENT

ಆಗ ಪಕ್ಕದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ಗೆ ಬೆಂಕಿ ತಗುಲಿ, ಸಿಲಿಂಡರ್‌ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಶೇಕ್‌ ನವೀದ್‌ ಸೇರಿದಂತೆ ಸಮೀಪದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಪಕ್ಕದಲ್ಲಿದ್ದ ಕಾರಿಗೂ ಹಾನಿಯಾಗಿದೆ. ಬಳಿಕ ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.

ಕಾರಣ ನಿಗೂಢ: ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಪಾದಚಾರಿ ಮಾರ್ಗದಲ್ಲಿ ತಳ್ಳುವ ಗಾಡಿ ನಿಲ್ಲಿಸಿ, ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಅಡುಗೆ ಅನಿಲ ಸಿಲಿಂಡರ್‌ ಇರಿಸಿದ್ದ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗಾಯಾಳು ಶೇಕ್‌ ನವೀದ್‌ ದೂರು ನೀಡಿದ್ದಾರೆ. ಬಾಗಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.