ADVERTISEMENT

ಸಿಲಿಂಡರ್‌ ಸ್ಫೋಟ; ಗಾಯಗೊಂಡಿದ್ದ ದಂಪತಿ ಸಾವು

ಮಕ್ಕಳಿಗೂ ಸುಟ್ಟ ಗಾಯಗಳು

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 20:26 IST
Last Updated 6 ಜನವರಿ 2019, 20:26 IST
ಗ್ಯಾಸ್ ಸಿಲಿಂಡರ್ ಸಾಂದರ್ಭಿಕ ಚಿತ್ರ
ಗ್ಯಾಸ್ ಸಿಲಿಂಡರ್ ಸಾಂದರ್ಭಿಕ ಚಿತ್ರ   

ಬೆಂಗಳೂರು: ನಾಗಶೆಟ್ಟಿಹಳ್ಳಿ ಸಮೀಪದ ನಾರಾಯಣಪ್ಪ ಲೇಔಟ್‌ನಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದ ಅಂಬ್ರಜ್ (32) ಹಾಗೂ ಪ್ರತಿಮಾ (30) ದಂಪತಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ಒಡಿಶಾದ ದಂಪತಿ, 9 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಅಂಬ್ರಜ್ ಬಡಗಿಯಾಗಿದ್ದರು. ಅವರ ಮಕ್ಕಳಾದ ಸ್ಮೃತಿ (7) ಹಾಗೂ ಶಾಲಿನಿ (3) ದೇಹವೂ ಶೇ 20ರಷ್ಟು ಸುಟ್ಟು ಹೋಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ (ಜ.1) ರಾತ್ರಿ ಹೊಸ ಸಿಲಿಂಡರ್ ಅಳವಡಿಸುವಾಗ ರೆಗ್ಯುಲೇಟರ್ ಒಡೆದು ಹೋಗಿತ್ತು. ಈ ವಿಚಾರ ಪ್ರತಿಮಾ ಅವರ ಗಮನಕ್ಕೆ ಬಂದಿರಲಿಲ್ಲ. ಇದರಿಂದ ರಾತ್ರಿಯಿಡೀ ಅನಿಲ ಸೋರಿಕೆಯಾಗಿ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು.

ADVERTISEMENT

ಮರುದಿನ ಬೆಳಿಗ್ಗೆ 8.30ರ ಸುಮಾರಿಗೆ ಪ್ರತಿಮಾ ಮಕ್ಕಳಿಗೆ ಹಾಲು ಕಾಯಿಸಲೆಂದು ಬೆಂಕಿ ಕಡ್ಡಿ ಗೀರಿದ್ದರು. ಆಗ ಒಮ್ಮೆಲೆ ಬೆಂಕಿ ಹೊತ್ತಿಕೊಂಡು, ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸಹ ಸಿಡಿದಿತ್ತು. ಸ್ಫೋಟದ ತೀವ್ರತೆಗೆ ಮನೆಯ ಚಾವಣಿಯೇ ಎಗರಿ ಹೋಗಿತ್ತು.

ಪತ್ನಿಯನ್ನು ರಕ್ಷಿಸಲು ಅಡುಗೆ ಕೋಣೆಗೆ ಹೋದ ಅಂಬ್ರಜ್ ದೇಹಕ್ಕೂ ಬೆಂಕಿ ಹೊತ್ತಿಕೊಂಡಿತ್ತು. ಪೋಷಕರು ಚೀರಾಟ ಕೇಳಿ ಮಕ್ಕಳೂ ಕೋಣೆಯಿಂದ ಆಚೆ ಬಂದಿದ್ದರು. ಆಗ ಅವರಿಗೂ ಸುಟ್ಟ ಗಾಯಗಳಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.