ADVERTISEMENT

ಮುಂದೇನು ಪ್ರಶ್ನೆಗೆ ಡಿಕೆಶಿ ಕೊಟ್ಟ ಉತ್ತರ, ಕಾಲವೇ ಎಲ್ಲಕ್ಕೂ ಉತ್ತರಿಸುತ್ತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 7:31 IST
Last Updated 27 ಅಕ್ಟೋಬರ್ 2019, 7:31 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಜಾರಿ ನಿರ್ದೇಶನಾಲಯದ ವಿಚಾರಣೆ, ಜೈಲು ವಾಸಗಳ ನಂತರ ಡಿಕೆಶಿ ಚಾರ್ಮ್‌ ಕಡಿಮೆಯಾಗಿದ್ಯಾ? ಕಾಂಗ್ರೆಸ್‌ ಪಕ್ಷ ಅವರನ್ನು ಹೇಗೆ ನಡೆಸಿಕೊಳ್ಳಬಹುದು?’

– ತಮಗೆದುರಾದ ಈ ಪ್ರಶ್ನೆಗಳಿಗೆ ಡಿಕೆಶಿ ಸ್ವಲ್ಪವೂ ವಿಚಲಿರಾಗದೆ ನೀಡಿದ ಉತ್ತರ, ‘ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತೆ. ಸ್ವಲ್ಪ ಕಾದುನೋಡಿ’.

ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗ ನಾನು ಏನು ಕಡಿಮೆ ಆಗಿದ್ದೀನಿ?ಮುಂದೇನಾಗುತ್ತೆ ನೋಡಿ’ ಎಂದು ಪ್ರಶ್ನೆ ಕೇಳಿದ ಪತ್ರಕರ್ತರಿಗೆ ನೇರ ಉತ್ತರ ನೀಡಿದರು.

ADVERTISEMENT

‘ನಾವು ಒಂದು ವ್ಯವಸ್ಥೆ ಒಳಗೆ ಕೆಲಸ ಮಾಡ್ತಿದ್ದೀವಿ. ವಿಚಾರಣೆ ವೇಳೆ ಕೆಲವುದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹೇಳಿದ್ದೇನೆ. ಅವೆಲ್ಲವನ್ನೂ ನಾನು ಸಂಗ್ರಹಿಸಬೇಕಿದೆ. ನನ್ನ ವಕೀಲರು ಒಂದಿಷ್ಟು ದಾಖಲೆಗಳನ್ನು ಕಲೆ ಹಾಕಿದ್ದಾರೆ. ಅವನ್ನು ನಾನು ಕಣ್ಣಾಡಿಸದೇ ಸಲ್ಲಿಸಲು ಆಗುವುದಿಲ್ಲ. ಆರೋಗ್ಯ ತುಸು ಏರುಪೇರಾಗಿದೆ’ ಎಂದು ಡಿ.ಕೆ.ಶಿವಕುಮಾರ್‌ ತಮ್ಮ ಮೇಲಿರುವ ಒತ್ತಡ ಮತ್ತು ತಮ್ಮ ದೇಹಸ್ಥಿತಿಯ ಮಾಹಿತಿ ಹಂಚಿಕೊಂಡರು.

‘ನನ್ನ ತಾಯಿಗೂ ಸಮನ್ಸ್‌ ಬಂದಿದೆ. ಅವರ ವಿಚಾರಣೆ ಸಂದರ್ಭ ನಾನೂ ನ್ಯಾಯಾಲಯಕ್ಕೆ ಹೋಗಬೇಕು. ಗೌರಿ ಹಬ್ಬದ ದಿನವೇ ಹಿರಿಯರಿಗೆ ಎಡೆ ಇಡುವುದು ನನ್ನ ಕುಟುಂಬದ ಸಂಪ್ರದಾಯ. ಈ ಬಾರಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾಳೆ ನನ್ನೂರು ದೊಡ್ಡಆಲದಹಳ್ಳಿಯಲ್ಲಿ ತಂದೆಗೆ ಎಡೆ ಇಡುವ, ಗೌರವಿಸುವ ಪೂಜೆ ಮಾಡಬೇಕಿದೆ.ನನ್ನ ಅಧ್ಯಾತ್ಮ ಶಕ್ತಿಕೇಂದ್ರ ನೊಣವಿನಕೆರೆ ಅಜ್ಜಯ್ಯನವರ ದರ್ಶನಕ್ಕೆ ಹೋಗಬೇಕಿದೆ’ ಎಂದು ಶಿವಕುಮಾರ್ ತಮ್ಮ ಆದ್ಯತೆಗಳನ್ನು ವಿವರಿಸಿದರು.

ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ತೋರಿಸಿರುವ ಪ್ರೀತಿಯಿಂದ ಸಂತೋಷವಾಗಿದೆ ಎಂದ ಅವರು, ಬೆಳಿಗ್ಗೆಯಿಂದಲೂ ಬಹಳಷ್ಟು ಜನ ಶಾಸಕರು, ಮುಖಂಡರು,ಶಾಸಕಾಂಗ ಪಕ್ಷದ ನಾಯಕರು, ಮಾಜಿ ಅಧ್ಯಕ್ಷರು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.ಪಕ್ಷ ಭೇದ ಮರೆತು ಪ್ರೀತಿ ತೋರಿಸ್ತಾ ಇದ್ದಾರೆ. ಯಾವ ಜನ್ಮದ ಪುಣ್ಯವೋ ನನಗೆ ಗೊತ್ತಿಲ್ಲ. ಅವರ ವಿಶ್ವಾಸ ಶಕ್ತಿ ಉಳಿಸಿಕೊಳ್ಳುವ ಶಕ್ತಿ ಭಗವಂತ ನನಗೆ ಕೊಡಲಿ’ ಎಂದು ಪ್ರಾರ್ಥಿಸಿದರು.

‘ನನ್ನ ಆರೋಗ್ಯ ಸ್ಥಿತಿ ಇನ್ನೂ ಸರಿಯಾಗಿಲ್ಲ. ಬಿಪಿ ನಿಯಂತ್ರಣಕ್ಕೆ ಬಂದಿಲ್ಲ. ಹೆಚ್ಚು ಹೊತ್ತು ಕೂರೋಕೂ ಆಗ್ರಿಲ್ಲ. ಚೆಕಪ್ ಮಾಡಿಸಬೇಕಿದೆ. ಪ್ರೀತಿಯಿಂದಬಂದವರನ್ನು ಭೇಟಿಯಾಗದೆ ಕಳಿಸಿದರೆ ಸರಿಯಿರುವುದಿಲ್ಲ ಎನ್ನುವ ಕಾರಣಕ್ಕೆ ಎಲ್ಲರನ್ನೂ ಭೇಟಿಯಾದೆ’ಎಂದು ವಿವರಿಸಿದರು.

ಉಪಚುನಾವಣೆ ವಿಚಾರ: ತೀರ್ಪಿನ ನಂತರ ತೀರ್ಮಾನ

ತೀ‍ರ್ಪು ಏನಾಗುತ್ತೋ ನನಗೆ ಗೊತ್ತಿಲ್ಲ. ಸಂವಿಧಾನದ ಪೀಠದ ಏನು ಹೇಳುತ್ತೋ ನೋಡೋಣ. ಚುನಾವಣೆ ನಡೆಯುವುದು, ಬಿಡುವುದು ಸುಪ್ರೀಂಕೋರ್ಟ್‌ ತೀರ್ಪು ಅವಲಂಬಿಸಿದೆ. ಪಕ್ಷದ ಅಧ್ಯಕ್ಷರು ಯಾವ ಪ್ಲಾನ್ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಆದೇಶ ಕೊಟ್ಟಿದ್ದನ್ನು ನಾನು ಪಾಲಿಸುತ್ತೇನೆ.ರಾಷ್ಟ್ರೀಯ ನಾಯಕರನ್ನು ಭೇಟಿಯಾದಾಗಲೂ ರಾಜಕಾರಣದ ಬಗ್ಗೆ ನಾನು ಮಾತನಾಡಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.