ADVERTISEMENT

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನೇಮಕ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 20:15 IST
Last Updated 11 ಮಾರ್ಚ್ 2020, 20:15 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   
""
""

ಬೆಂಗಳೂರು: ನಾಯಕತ್ವ ಗೊಂದಲದಿಂದ ಕಂಗೆಟ್ಟು ಕುಳಿತಂತಿದ್ದ ಕಾಂಗ್ರೆಸ್‌ನ ರಾಜ್ಯ ಘಟಕಕ್ಕೆ, ‘ಕೈ’ ಪಾಳೆಯದ ‘ಟ್ರಬಲ್ ಶೂಟರ್‌’ ಎಂದೇ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್‌ ನೇಮಕ ಮಾಡಿದೆ.

1999–2000ರ ಅವಧಿಯಲ್ಲಿ ಎಸ್‌.ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅದಾದ ಬಳಿಕ, ಲಿಂಗಾಯತ, ಹಿಂದುಳಿದ, ಪರಿಶಿಷ್ಟ ಜಾತಿ, ಬ್ರಾಹ್ಮಣ ಸಮುದಾಯವರಿಗೆ ಹೆಚ್ಚಿನ ಆದ್ಯತೆ ಸಿಕ್ಕಿತ್ತು. 20 ವರ್ಷಗಳ ತರುವಾಯ ಒಕ್ಕಲಿಗ ಸಮುದಾಯದ ನಾಯಕರೊಬ್ಬರಿಗೆ ಕೆಪಿಸಿಸಿ ಪಟ್ಟ ಸಿಕ್ಕಂತಾಗಿದೆ. ಪಕ್ಷವನ್ನು ಬಲಪಡಿಸಲು ಜಾತಿ/ಧರ್ಮದ ಲೆಕ್ಕಾಚಾರದಲ್ಲಿ ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.

2019ರ ಡಿಸೆಂಬರ್‌ ತಿಂಗಳಿನಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿದ ಕಾರಣಕ್ಕೆ ನೈತಿಕ ಹೊಣೆ ಹೊತ್ತು ದಿನೇಶ್ ಗುಂಡೂರಾವ್‌ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ನೀಡಿದ್ದರು.

ADVERTISEMENT

ಸುಮಾರು ಮೂರು ತಿಂಗಳಿನಿಂದ ಕೆಪಿಸಿಸಿ ಅಧ್ಯಕ್ಷಗಾದಿಗೆ ದೊಡ್ಡ ಮಟ್ಟದ ಪೈಪೋಟಿಯೇ ಏರ್ಪಟ್ಟಿತ್ತು. ದಿನೇಶ್‌ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಿದೆ. ಸುಮಾರು ಒಂದು ಮುಕ್ಕಾಲು ವರ್ಷದ ದಿನೇಶ್‌ ಅಧಿಕಾರ ಇದರಿಂದ ಕೊನೆಗೊಂಡಂತಾಗಿದೆ.

1994ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಸಿಗದೇ ಇರುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಡಿ.ಕೆ. ಶಿವಕುಮಾರ್‌, ಬಳಿಕ ಅಚಲ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿದವರು. ಪಕ್ಷ ಸಂಕಟ ಎದುರಿಸಿದ ಹೊತ್ತಿನೊಳಗೆ ಎದೆಕೊಟ್ಟು ನಿಂತು ಸೆಣೆಸಿದವರು. ಇದನ್ನು ಗುರುತಿಸಿರುವ ಹೈಕಮಾಂಡ್‌, ನಾಯಕರ ವಿರೋಧ ಲೆಕ್ಕಿಸದೇ ಅಧ್ಯಕ್ಷಗಾದಿ ನೀಡಿದೆ.

ಮೂವರು ಕಾರ್ಯಾಧ್ಯಕ್ಷರು
ಕೆಪಿಸಿಸಿಗೆ ದಿನೇಶ್‌ ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ಈಶ್ವರ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಬಳಿಕ ಎಸ್.ಆರ್. ಪಾಟೀಲರಿಗೂ ಈ ಸ್ಥಾನ ನೀಡಲಾಗಿತ್ತು. ಲೋಕಸಭೆ ಚುನಾವಣೆ ಸೋಲಿನ ಬಳಿಕ ಪಾಟೀಲರು ರಾಜೀನಾಮೆ ನೀಡಿದ್ದರು. ಈಗ ಕಾರ್ಯಾಧ್ಯಕ್ಷರ ಸಂಖ್ಯೆಯನ್ನು ಮೂರಕ್ಕೆ ಏರಿಸಲಾಗಿದೆ.

ಅಧ್ಯಕ್ಷರನ್ನಾಗಿ ಶಿವಕುಮಾರ್ ನೇಮಕ ಮಾಡುವುದೇ ಆದರೆ, ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕು, ತಮ್ಮ ಜತೆ ಉತ್ತಮ ಬಾಂಧವ್ಯ ಇರುವ ಸತೀಶ ಜಾರಕಿಹೊಳಿ ಹಾಗೂ ಯು.ಟಿ. ಖಾದರ್‌ ಅಥವಾ ಜಮೀರ್ ಅಹಮದ್ ಪೈಕಿ ಒಬ್ಬರನ್ನು ನೇಮಿಸಬೇಕು ಎಂದು ಸಿದ್ದರಾಮಯ್ಯ ಹಟ ಹಿಡಿದಿದ್ದರು. ಅವರ ಒಂದು ಬೇಡಿಕೆ ಮನ್ನಿಸಿರುವ ಹೈಕಮಾಂಡ್‌ ಜಾರಕಿಹೊಳಿಗೆ ಮಣೆ ಹಾಕಿದೆ. ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಾಗ ತನ್ನದೇ ಆಯ್ಕೆಯಾದ ಸಲೀಂ ಅಹಮದ್ ಅವರನ್ನು ಮುಂದೆ ಬಿಟ್ಟಿದೆ.

ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ,ಸಲೀಂ ಅಹಮದ್

ಮೂಲನಿವಾಸಿಗರ ಮೇಲುಗೈ: ಕಾಂಗ್ರೆಸ್‌ನಲ್ಲಿ ಮೂಲನಿವಾಸಿಗರು ಹಾಗೂ ವಲಸೆ ಬಂದವರ ಮಧ್ಯೆ ನಾಯಕತ್ವಕ್ಕಾಗಿ ಸ್ಪರ್ಧೆ ನಡೆಯುತ್ತಿರುವುದು ಇದು ಹೊಸತೇನಲ್ಲ. ಸದ್ಯ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಕಾಂಗ್ರೆಸ್‌ ಚುಕ್ಕಾಣಿಯನ್ನು ತೆಕ್ಕೆಗೆ ತೆಗೆದುಕೊಂಡ ಮೇಲೆ ಈ ರೀತಿಯ ಪೈಪೋಟಿ ಬಿರುಸು ಪಡೆದಿತ್ತು. ಪರಮೇಶ್ವರ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಸಂದರ್ಭದಲ್ಲಿ ತನ್ನ ಮಾತು ಕೇಳುವ ದಿನೇಶ್ ಅವರನ್ನು ಈ ಗಾದಿಗೆ ಕೂರಿಸುವಲ್ಲಿ ಸಿದ್ದರಾಮಯ್ಯ ಯಶ ಪಡೆದಿದ್ದರು. ದಿನೇಶ್ ಅಧ್ಯಕ್ಷರಾದ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಆಯಕಟ್ಟಿನ ಹುದ್ದೆಯಲ್ಲಿದ್ದರು.

ಮೈತ್ರಿ ಸರ್ಕಾರ ಬಿದ್ದುಹೋಗಿ, ಉಪಚುನಾವಣೆ ನಡೆದ ಮೇಲೆ ದಿನೇಶ್‌ ರಾಜೀನಾಮೆ ಕೊಟ್ಟರು. ಸಿದ್ದರಾಮಯ್ಯ ಕೂಡ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ವಿರೋಧ ಪಕ್ಷದ ನಾಯಕ ಸ್ಥಾನ ಉಳಿಸಿಕೊಂಡಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಅವರನ್ನೇ ಮುಂದುವರಿಸಬೇಕು ಅಥವಾ ತಮ್ಮ ಜತೆ ನಿಕಟವಾಗಿ ಗುರುತಿಸಿಕೊಂಡಿರುವ ಎಂ.ಬಿ. ಪಾಟೀಲರಿಗೆ ಪಟ್ಟ ಕೊಡಿಸಬೇಕು ಎಂದು ಸಿದ್ದರಾಮಯ್ಯ ಶತಪ್ರಯತ್ನ ನಡೆಸಿದ್ದರು. ಶಿವಕುಮಾರ್‌ಗೆ ಸ್ಥಾನ ನೀಡಲು ತಕರಾರು ತೆಗೆದಿದ್ದರು.

ಕೆಪಿಸಿಸಿ ಗಾದಿಗೆ ಎಚ್.ಕೆ. ಪಾಟೀಲ, ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಹೆಸರುಗಳು ಮುಂಚೂಣಿಯಲ್ಲಿದ್ದವು. ಈ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಆಲಿಸಿ, ಒಮ್ಮತದ ನಿರ್ಧಾರಕ್ಕೆ ಬರಲು ಮುಂದಾಗಿದ್ದ ಹೈಕಮಾಂಡ್ ಮಧುಸೂದನ ಮಿಸ್ತ್ರಿ ಅವರನ್ನು ವೀಕ್ಷಕರಾಗಿ ರಾಜ್ಯಕ್ಕೆ ಕಳುಹಿಸಿತ್ತು. ಅವರು ನೀಡಿದ ವರದಿ ಹಾಗೂ ಹಿರಿಯ ಅಭಿಪ್ರಾಯ ಪಡೆದಿದ್ದ ಹೈಕಮಾಂಡ್‌ ಸಿದ್ದರಾಮಯ್ಯ ವಿರೋಧವನ್ನು ಬದಿಗಿಟ್ಟು ಶಿವಕುಮಾರ್ ಅವರನ್ನು ಆಯ್ಕೆ ಮಾಡಿದೆ.

ಇದೇ ವೇಳೆ ವಿರೋಧ ಪಕ್ಷದ ನಾಯಕ ಸ್ಥಾನದಿಂದಲೂ ಸಿದ್ದರಾಮಯ್ಯ ಅವರನ್ನು ಬದಲಿಸಬೇಕು. ಅದಾಗದೇ ಇದ್ದರೆ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳನ್ನು ಪ್ರತ್ಯೇಕಿಸಿ ಇಬ್ಬರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಮೂಲನಿವಾಸಿಗರು ಮಂಡಿಸಿದ್ದರು. ಅದಕ್ಕೆ ವರಿಷ್ಠರು ಸೊಪ್ಪು ಹಾಕಿಲ್ಲ. ಶಿವಕುಮಾರ್‌ಗೆ ಅವಕಾಶ ನೀಡುವ ಮೂಲಕ ಸಿದ್ದರಾಮಯ್ಯಗೆ ಪ್ರತಿಸ್ಪರ್ಧಿಯಾಗಬಹುದಾದ ಮತ್ತೊಂದು ಕೇಂದ್ರವನ್ನು ಸೃಷ್ಟಿಸಿರುವ ಹೈಕಮಾಂಡ್‌, ಸಿದ್ದರಾಮಯ್ಯನವರ ಶಕ್ತಿಯನ್ನೂ ಗಣನೆಗೆ ತೆಗೆದುಕೊಂಡಿದೆ. ಇದರಿಂದ ಸಿದ್ದರಾಮಯ್ಯಗೆ ತುಸು ಹಿನ್ನಡೆಯಾಗಿದ್ದರೂ ಅವರ ಸಾಮರ್ಥ್ಯವನ್ನೂ ಪಕ್ಷ ಗುರುತಿಸಿದೆ ಎಂಬ ಚರ್ಚೆಯೂ ನಡೆದಿದೆ.

ಉತ್ತರ–ದಕ್ಷಿಣ ಭೇದ ಮರೆ: ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪ್ರತಿನಿಧಿ. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅದೇ ಜಿಲ್ಲೆಯವರು. ಈಗ ಸತೀಶ ಜಾರಕಿಹೊಳಿ ಬೆಳಗಾವಿಯವರಾಗಿದ್ದು ಈ ಭಾಗಕ್ಕೆ ಆದ್ಯತೆ ಸಿಕ್ಕಿದೆ. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೀದರ್‌ ಪ್ರತಿನಿಧಿಯಾಗಿದ್ದರೆ, ಮುಖ್ಯಸಚೇತಕ ಅಜಯ್ ಸಿಂಗ್‌ ಕಲಬುರ್ಗಿಯವರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಮೂಲಕ ಮಣೆ ಹಾಕಲಾಗಿದೆ. ಹಾವೇರಿಯ ಸಲೀಂ ಅಹಮದ್‌ಗೂ ಪ್ರಾತಿನಿಧ್ಯ ನೀಡಲಾಗಿದೆ. ಬೆಂಗಳೂರಿನ ಎಂ. ನಾರಾಯಣಸ್ವಾಮಿಗೆ ಪರಿಷತ್‌ನ ಮುಖ್ಯ ಸಚೇತಕ ಸ್ಥಾನ ಸಿಕ್ಕಿದೆ.

ಪಕ್ಷದ ಬಲವರ್ಧನೆಗೆ ಜಾತಿ ಲೆಕ್ಕಾಚಾರ
ಪಕ್ಷದ ಬಲವರ್ಧನೆ ದೃಷ್ಟಿಯಿಂದ ಜಾತಿ ಲೆಕ್ಕಾಚಾರವನ್ನು ಹೈಕಮಾಂಡ್ ಗಮನಕ್ಕೆ ತೆಗೆದುಕೊಂಡಿದೆ. ರಾಜಕೀಯವಾಗಿ ಪ್ರಭಾವಿ ಸಮುದಾಯಗಳಾಗಿರುವ ಒಕ್ಕಲಿಗರಿಗೆ ಅಧ್ಯಕ್ಷ ಪಟ್ಟ ಹಾಗೂ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರಖಂಡ್ರೆಗೆ ಕಾರ್ಯಾಧ್ಯಕ್ಷ ಪಟ್ಟ ಕೊಡಲಾಗಿದೆ. ಅ‌ಷ್ಟೇ ಪ್ರಭಾವಿಯಾಗಿರುವ ಕುರುಬ ಸಮುದಾಯಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನ ದಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಾಬಲ್ಯಕ್ಕೆ ಬಂದಿರುವ ವಾಲ್ಮೀಕಿ ಸಮುದಾಯದ ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ಬೆನ್ನಿಗೆ ನಿಂತಿರುವ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯದ ಭಾಗವಾಗಿ ಸಲೀಂ ಅಹಮದ್‌ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ಲಭಿಸಿದೆ.

*
ರಾಜ್ಯದ ಎಲ್ಲ ಹಿರಿಯ ಹಾಗೂ ಕಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ಶಕ್ತಿ ಕೇಂದ್ರಗಳು ಎಂಬುದೆಲ್ಲ ಇಲ್ಲ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

*
ಕೆಪಿಸಿಸಿ ನೂತನ ಅಧ್ಯಕ್ಷರಾದ ಶಿವಕುಮಾರ್ ಅವರಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಹಕಾರ ನೀಡಿ ಪಕ್ಷಕ್ಕೆ ಇನ್ನಷ್ಟು ಬಲ ತುಂಬಬೇಕು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಗಣ್ಯರ ಅಭಿನಂದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.