ಡಿಕೆಶಿ
ಬೆಂಗಳೂರು: 'ಮೆಟ್ರೊ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಬಿಎಂಆರ್‌ಸಿಎಲ್‌ಗೆ ಅರ್ಜಿ ಹಾಕಲು ಕೆಎಂಎಫ್‌ಗೆ ಸೂಚನೆ ನೀಡಿದ್ದು, 10 ಸ್ಥಳಗಳ ಪೈಕಿ ಎಂಟು ಕಡೆಗಳಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೇನೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೆಟ್ರೊ ನಿಲ್ದಾಣಗಳಲ್ಲಿ ಅಮೂಲ್ ತನ್ನ ಮಳಿಗೆ ತೆರೆಯುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್, 'ಬಿಎಂಆರ್ ಸಿಎಲ್ ಅವರು ಕರೆದಿದ್ದ ಜಾಗತಿಕ ಟೆಂಡರ್ ನಲ್ಲಿ ಅಮೂಲ್ ನವರು ಅರ್ಜಿ ಹಾಕಿ ಎರಡು ಕಡೆ ಮಳಿಗೆ ತೆರೆದಿದ್ದಾರೆ. ಟೆಂಡರ್ ನಲ್ಲಿ ಭಾಗಿಯಾಗಿ ತೆರೆದಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಉಳಿದ ಎಂಟು ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ' ಎಂದರು.
'ಟೆಂಡರ್ ಗೆ ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್ ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದೇವೆ ಎಂದರು.
ಜಿಬಿಎಯಲ್ಲಿ ಪಾಲಿಕೆ ರಚನೆ: 'ಪಕ್ಷ ಸಂಘಟನೆ ವಿಚಾರ ಹಾಗೂ ಪಾಲಿಕೆ ಚುನಾವಣೆ ಸೇರಿದಂತೆ ನಮ್ಮ ಪಕ್ಷದ ಶಾಸಕರ ಜತೆ ಇಂದು ಚರ್ಚೆ ಮಾಡಿದ್ದೇನೆ. ಜಿಬಿಎಯಲ್ಲಿ ಎಷ್ಟು ಪಾಲಿಕೆ ರಚನೆ ಮಾಡಬೇಕು ಎನ್ನುವ ವಿಚಾರವಾಗಿ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿದ್ದು, ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಬಾಕಿ ಇದೆ. ಅವರ ವಿಶ್ವಾಸ ಪಡೆದು ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.
'ಸ್ವಚ್ಛ ಬೆಂಗಳೂರು ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಕಸವಿರುವ ಜಾಗದ ಫೋಟೊ ತೆಗೆದು ಅದನ್ನು ಈ ಸಂಖ್ಯೆಗೆ ರವಾನಿಸಿದರೆ ಒಂದು ವಾರದಲ್ಲಿ ಆ ಜಾಗದಲ್ಲಿರುವ ಕಸ ವಿಲೇವಾರಿ ಮಾಡಲಾಗುವುದು. ಇನ್ನು ರಸ್ತೆ ಗುಂಡಿ ಮುಚ್ಚುವ ವಿಚಾರವಾಗಿ ಶಾಸಕರು ತಮ್ಮ ಕ್ಷೇತ್ರಗಳ ವಾರ್ಡ್ ಗಳ ಬಗ್ಗೆ ಗಮನಹರಿಸಿ ರಸ್ತೆ ಕಾಮಗಾರಿಗೆ ಅನುದಾನವನ್ನು ನೀಡುತ್ತಿದ್ದೇವೆ' ಎಂದು ಮಾಹಿತಿ ನೀಡಿದರು.
ಆಸ್ತಿ ಖಾತಾ ದಾಖಲೆ ವಿತರಣೆ ಆಂದೋಲನ: 'ಬೆಂಗಳೂರಿನಲ್ಲಿ ಆಸ್ತಿ ಖಾತಾ ದಾಖಲೆ ಆಂದೋಲನ ರೂಪಿಸಲಾಗಿದ್ದು, ಜುಲೈ ತಿಂಗಳಿನಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿ ಪ್ರಾಯೋಗಿಕ ಯೋಜನೆ ಮಾಡಲಾಗಿದ್ದು, 25 ಸಾವಿರ ಆಸ್ತಿಗಳ ಖಾತಾ ದಾಖಲೆಗಳು ಸಿದ್ಧಗೊಂಡಿದ್ದು, ಜುಲೈ ಒಂದರಿಂದ ಇಡೀ ತಿಂಗಳು ಈ ಆಸ್ತಿ ಇ-ಖಾತಾ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
'ಬೆಂಗಳೂರಿನಲ್ಲಿ 25 ಲಕ್ಷ ಮನೆಗಳು ಆಸ್ತಿಗಳಿದ್ದು, ಈ ಪೈಕಿ 5 ಲಕ್ಷ ಮಂದಿ ದಾಖಲೆ ಅಪ್ ಲೋಡ್ ಮಾಡಿದ್ದಾರೆ. ಇನ್ನು 20 ಲಕ್ಷ ಆಸ್ತಿಗಳ ದಾಖಲೆ ಬಾಕಿ ಇದೆ' ಎಂದು ತಿಳಿಸಿದರು.
ಇ ಖಾತಾ ವಿಚಾರವಾಗಿ ಅಭಿಯಾನ ಮಾಡಲಾಗುವುದೇ ಎಂದು ಕೇಳಿದಾಗ, 'ಜುಲೈ 1 ರಿಂದ ಇ ಖಾತಾ ವಿಚಾರವಾಗಿ ಆಂದೋಲನ ಮಾಡಲಾಗುವುದು. ಆಮೂಲಕ ಖಾಸಗಿ ಆಸ್ತಿ ಮಾಲೀಕರು ಜಾಗೃತಿ ವಹಿಸಿ, ತಮ್ಮ ದಾಖಲೆಗಳನ್ನು ನೀಡಿ ಇ ಖಾತಾ ಮಾಡಿಸಿಕೊಳ್ಳಲು ಒಂದು ತಿಂಗಳ ಕಾಲ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ವಿಚಾರವಾಗಿ ಮನೆ ಮನೆ ಪ್ರಚಾರ, ಜಾಹೀರಾತು ಸೇರಿದಂತೆ ಪ್ರಚಾರ ಮಾಡಲಾಗುವುದು” ಎಂದು ತಿಳಿಸಿದರು.
ವೈಟ್ ಟ್ಯಾಪಿಂಗ್ ಯೋಜನೆಗಳ ಬಗ್ಗೆ ಕೇಳಿದಾಗ, “ಇನ್ನು ನಗರದಲ್ಲಿ ವೈಟ್ ಟ್ಯಾಪಿಂಗ್ ಕೆಲಸ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ನಾನೇ ಕಾಮಗಾರಿ ಗುಣಮಟ್ಟ ಪರೀಕ್ಷೆ ಮಾಡಿದ್ದೇನೆ. ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿವೆ” ಎಂದರು. .
'ಬಿ ಖಾತಾ ನೀಡುವ ವಿಚಾರವಾಗಿ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದು, ಕಾನೂನು ಆಯಾಮಗಳ ಚರ್ಚೆ ಮಾಡಿ ಅಧಿಕೃತ ಘೋಷಣೆ ಮಾಡಲಾಗುವುದು” ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.