ADVERTISEMENT

ದಾಬಸ್‌ಪೇಟೆ: ಸೊಬಗು ಕಳೆದುಕೊಂಡ ಜಾನುವಾರು ಜಾತ್ರೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:01 IST
Last Updated 31 ಜನವರಿ 2019, 20:01 IST
ಗುಟ್ಟೆ ಜಾತ್ರೆಯಲ್ಲಿ ಕಂಡುಬಂದ ರಾಸುಗಳು
ಗುಟ್ಟೆ ಜಾತ್ರೆಯಲ್ಲಿ ಕಂಡುಬಂದ ರಾಸುಗಳು   

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನಲ್ಲಿ ನಡೆಯುವ ಪ್ರಮುಖ ಜಾನುವಾರು ಜಾತ್ರೆಗಳಲ್ಲಿ ‘ಮಹಿಮ ರಂಗನಾಥ ಸ್ವಾಮಿ’ ಜಾತ್ರೆಯೂ ಒಂದು. ಈ ಭಾಗದ ಜನರ ಆಡು ಭಾಷೆಯಲ್ಲಿ ಇದು ’ಗುಟ್ಟೆ ಜಾತ್ರೆ’. ರಾಜ್ಯದ ಹಲವು ಭಾಗಗಳಲ್ಲಿಯೂ ಸುಪ್ರಸಿದ್ಧಿಯಾಗಿದೆ. ದೇವಸ್ಥಾನದ ಸುತ್ತಲೂ ಹರಡಿಕೊಂಡಿರುವ ಗುಟ್ಟೆಯ ಮಧ್ಯದ ತೋಪಿನಲ್ಲಿ ಈಚೆಗೆ ಜಾತ್ರೆ ನಡೆಯಿತು.

ಈ ಬಾರಿಯ ಜಾತ್ರೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರಾಸುಗಳು ಸೇರಿದ್ದವು. ಅವುಗಳಲ್ಲಿ ನಾಟಿ ತಳಿಗಳಾದ ಅಮೃತ್ ಮಹಲ್, ಹಳ್ಳಿಕಾರ್‌ ಹಾಗೂ ಸ್ಥಳೀಯ ಬಿಳಿ ಹಾಗೂ ಕಪ್ಪು ಮಿಶ್ರಿತ ರಾಸುಗಳು ವಿಶೇಷವಾಗಿದ್ದವು. ಹಲವು ಭಾಗಗಳಿಂದ ರೈತರು ರಾಸುಗಳನ್ನು ಕರೆ ತಂದಿದ್ದರು.

₹ 50 ಸಾವಿರದಿಂದ ₹ 3.50 ಲಕ್ಷ ಮೌಲ್ಯದ ರಾಸುಗಳು ಜಾತ್ರೆಯಲ್ಲಿ ಇದ್ದವು.

ADVERTISEMENT

‘ಮಳೆ ಅಭಾವ, ಮೇವಿನ ಕೊರತೆ ಹಾಗೂ ಸಾಕಾಣಿಕೆ ವೆಚ್ಚದ ಹೆಚ್ಚಳದಿಂದಾಗಿ ಮತ್ತು ಯಾಂತ್ರೀಕರಣದಿಂದಾಗಿ ರಾಸುಗಳ ಸಾಕಾಣಿಕೆಯಿಂದ ಗ್ರಾಮೀಣ ಜನರು ವಿಮುಖರಾಗುತ್ತಿದ್ದಾರೆ. ಗ್ರಾಮ್ಯ ಹಾಗು ಜನಪದ ಸೊಗಡು ಹೊಂದಿದ್ದ ಜಾತ್ರೆಯು ತನ್ನ ಮೂಲ ಸೊಬಗನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ’ ಎಂದು ಸುರೇಶ್ ಅಭಿಪ್ರಾಯಪಟ್ಟರು.

‘ಹಿಂದೆ ಜಾತ್ರೆಯೆಂದರೆ ಸಾಕು ಖುಷಿಯಿಂದ ಗಾಡಿ ಕಟ್ಟಿಕೊಂಡು ಅದರಲ್ಲಿ ಪಾತ್ರೆ, ಹುಲ್ಲು, ದವಸ ಧಾನ್ಯ ತುಂಬಿಕೊಂಡು ಬಂದು ವಾರಗಟ್ಟಲೆ ಜಾತ್ರೆಯಲ್ಲಿ ಉಳಿದುಕೊಳ್ಳುತ್ತಿದ್ದೆವು. ತಮ್ಮ ರಾಸುಗಳನ್ನು ಮಾರಿ, ಇಲ್ಲಿಯೇ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದೆವು. ಈಗ ಅದೆಲ್ಲಾ ಸಾಧ್ಯವಾಗದ ಮಾತಾಗಿದೆ. ಕೇವಲ ಬಹುಮಾನಕ್ಕೆ ಸಾಕುವಂತಾಗಿದೆ‘ ಎಂದವರು ಹೆಬ್ಬೂರಿನ ರೈತ ಮರಿಯಪ್ಪ.

‘ಈ ಬಾರಿ ವ್ಯಾಪಾರದ ಭರಾಟೆ ಕಾಣಲಿಲ್ಲ. ಬಂದವರು ರಾಸುಗಳನ್ನು ನೋಡಿ, ಬೆಲೆ ಕೇಳಿ ಮುಂದೆ ಸಾಗುತ್ತಿದ್ದರು. ಕೆಲವರಷ್ಟೇ ವ್ಯಾಪಾರಕ್ಕೆ ನಿಲ್ಲುತ್ತಿದ್ದರು’ ಎಂದು ಜಾತ್ರೆಯಲ್ಲಿ ದಲ್ಲಾಳಿ ಕೆಲಸ ಮಾಡುವ ನರಸಿಂಹಯ್ಯ ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.