ADVERTISEMENT

ಸಾಲಹಟ್ಟಿ ಗ್ರಾಮಸ್ಥರಿಗೆ ಚಿರತೆ ಭೀತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:19 IST
Last Updated 1 ಆಗಸ್ಟ್ 2019, 20:19 IST

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ಸಾಲಹಟ್ಟಿ ಗ್ರಾಮದ ಸುತ್ತಲೂ ಕಾಡು, ನೀಲಗಿರಿ ತೋಟ ಹಾಗೂ ಮುಳ್ಳು ಪೊದೆಗಳು ಆವರಿಸಿರುವುದರಿಂದ ಗ್ರಾಮದ ಜನ ಕಾಡು ಪ್ರಾಣಿಗಳ ಭಯ ಎದುರಿಸುತ್ತಿದ್ದಾರೆ.

ಚಿರತೆ, ಕರಡಿ, ಸೀಳ್ ನಾಯಿ (ದೊಡ್ಡನಾಯಿ) ಇಲ್ಲಿ ತಮ್ಮ ವಾಸಸ್ಥಾನ ಮಾಡಿಕೊಂಡಿವೆ.

ಗ್ರಾಮದಲ್ಲಿ ಸುಮಾರು 30 ಮನೆಗಳಿವೆ. ಬಹುತೇಕರು ದನ-ಕುರಿ-ಮೇಕೆ ಸಾಕಿಕೊಂಡು ಜೀವನ ಮಾಡುತ್ತಿದ್ದಾರೆ. ಇವರೆಲ್ಲ ಸಂಜೆಗೆ ಅವುಗಳನ್ನು ಕೊಟ್ಟಿಗೆಗೆ ಕಟ್ಟಿಬಿಡಬೇಕು. ಇಲ್ಲದಿದ್ದರೆ ಚಿರತೆ ಹಾಗೂ ಇನ್ನಿತರ ಕಾಡು ಪ್ರಾಣಿಗಳು ದಾಳಿ ಮಾಡುವ ಆತಂಕ. ಕೆಲವೊಮ್ಮೆ ಕೊಟ್ಟಿಗೆ ಮನೆಗಳಿಗೂ ನುಗ್ಗುತ್ತವೆ. ಯಾವಾಗ ಚಿರತೆ ದಾಳಿ ಮಾಡುತ್ತದೋ ಅನ್ನುವ ಆತಂಕ ಅವರದು.

ADVERTISEMENT

3–4 ದಿನಗಳ ಹಿಂದೆ ಗ್ರಾಮದ ಹುಚ್ಚಪ್ಪ ಎಂಬುವರ ಮನೆಯ ಬಳಿ ಸಂಜೆ ವೇಳೆ ಕುರಿ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಅಲ್ಲಿಯೇ ಇದ್ದ ಹುಚ್ಚಪ್ಪ ಬಿಡಿಸಿಕೊಳ್ಳಲು ಹೋಗಿದ್ದಾರೆ. ಆಗ ಅದು ಅವರ ಕಾಲು ಹಿಡಿದುಕೊಂಡಿದೆ.

ಭಯಗೊಂಡು ಜೋರಾಗಿ ಕೂಗಿಕೊಂಡಾಗ ಹೆದರಿ ಓಡಿ ಹೋಗಿದೆ. ಕುರಿ ಹಾಗೂ ಹುಚ್ಚಪ್ಪನ ಕಾಲಿಗೆ ಗಾಯವಾಗಿದೆ.

'ಕೃಷಿಯನ್ನು ನಂಬಿ ಹಾಗೂ ತಮ್ಮ ಆನಾದಿಕಾಲದ ವೃತ್ತಿ ಜೀವನವಾದ ಕುರಿ ಸಾಕಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮವು ಒಂದಷ್ಟು ಕುರಿಗಳಿವೆ. ಈಗಾಗಲೇ ರುಚಿ ನೋಡಿರುವ ಚಿರತೆ ಅವುಗಳ ಮೇಲೆ ಎಲ್ಲಿ ದಾಳಿ ಮಾಡುತ್ತದೆಯೋ ಎನ್ನುವ ಆತಂಕದಲ್ಲಿ ದಿನ ಕಳೆಯುತ್ತಿದ್ದೇವೆ' ಎನ್ನುತ್ತಾರೆ ಹುಚ್ಚಪ್ಪ. 'ದಾಳಿಯಾದ ವ್ಯಕ್ತಿಗೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ದ್ದೇವೆ. ದಾಳಿಗೊಳಗಾದ ಕುರಿ ಸತ್ತರೆ ₹5 ಸಾವಿರ ಪರಿಹಾರ ಕೊಡಲಾಗುವುದು. ಚಿರತೆ ಹಿಡಿಯುವ ಪ್ರಯತ್ನ ಮಾಡ ಲಾಗುವುದು’ ಎಂದು ಅರಣ್ಯ ರಕ್ಷಕ ಶ್ರೀನಾಥ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.