ADVERTISEMENT

ಜ.29ರಿಂದ ಅರಮನೆ ಮೈದಾನದಲ್ಲಿ ‘ದಕ್ಷಿಣಾಸ್ಯದರ್ಶಿನಿ’ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:40 IST
Last Updated 27 ಜನವರಿ 2026, 15:40 IST
   

ಬೆಂಗಳೂರು: ‘ವೇದಾಂತ ಭಾರತೀ ಹಾಗೂ ಪರಮ್‌ ಫೌಂಡೇಷನ್‌ನಿಂದ ಜ.29ರಿಂದ ಫೆ. 1ರವೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ‘ದಕ್ಷಿಣಾಸ್ಯದರ್ಶಿನಿ’ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ’ ಎಂದು ವೇದಾಂತ ಭಾರತಿ ಟ್ರಸ್ಟಿ ಹಾಗೂ ಹಿರಿಯ ವಕೀಲ ಎಸ್.ಎಸ್. ನಾಗಾನಂದ ತಿಳಿಸಿದರು. 

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರದರ್ಶನದಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನದ ವಿವಿಧ ಪ್ರಯೋಗಗಳ ಮೂಲಕ ದಕ್ಷಿಣಾಮೂರ್ತಿ ಅಷ್ಟಕದಲ್ಲಿನ ವಿಚಾರಗಳನ್ನು ಎಲ್ಲರಿಗೂ ತಿಳಿಸಲಾಗುತ್ತದೆ. ಈ ಎಲ್ಲ ಪ್ರಯೋಗಗಳನ್ನು ಶಾಲಾ–ಕಾಲೇಜಿನ ವಿದ್ಯಾರ್ಥಿಗಳೇ ಪ್ರಸ್ತುತಪಡಿಸಲಿದ್ದಾರೆ.  ವೇದಾಂತವನ್ನು ಅಭ್ಯಾಸ ಮಾಡಿದ ಸಂಸ್ಕೃತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ವಾಂಸರು ಆಯಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಅಂಶಗಳ ವಿವರಣೆ ನೀಡಲಿದ್ದಾರೆ’ ಎಂದು ವಿವರಿಸಿದರು.

‘ವಿವಿಧ ಕಾಲೇಜು ಹಾಗೂ ಸಂಸ್ಥೆಗಳು 50ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7.30ರವರೆಗೆ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರಿಗೆ ಈ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು. 

ADVERTISEMENT

29ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಇಸ್ರೊದ ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಎಸ್. ಸೋಮನಾಥ, ಇತಿಹಾಸ ತಜ್ಞ ವಿಕ್ರಮ್ ಸಂಪತ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಜ. 31ರಂದು ಬೆಳಿಗ್ಗೆ 11ಕ್ಕೆ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಆಯೋಜಿಸಿರುವ ‘ವಿವೇಕದೀಪ್ತಿ’ ಸಮಾವೇಶದಲ್ಲಿ ದಕ್ಷಿಣಾಮೂರ್ತಿ ಅಷ್ಟಕವನ್ನು ಸಾಮೂಹಿಕ ಪಾರಾಯಣ ಮಾಡಲಾಗುತ್ತದೆ. ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಈ ಸಮಾವೇಶದ ಸಾನ್ನಿಧ್ಯ ವಹಿಸಲಿದ್ದಾರೆ. ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿ ಶಂಕರಭಾರತೀ ಸ್ವಾಮೀಜಿ, ಬ್ರಹ್ಮಾನಂದ ಭಾರತೀ ಸ್ವಾಮೀಜಿ ಭಾಗವಹಿಸಲಿದ್ದಾರೆ’ ಎಂದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.