ADVERTISEMENT

‘ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 18:39 IST
Last Updated 3 ನವೆಂಬರ್ 2025, 18:39 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಸಮುದಾಯದ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ. 

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹದೇವಸ್ವಾಮಿ ಎಂ. ಚಿದರವಳ್ಳಿ, ‘ದಲಿತ ಸಮುದಾಯದ ಹಲವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಇದುವರೆಗೂ ಯಾರೊಬ್ಬರಿಗೂ ಮುಖ್ಯಮಂತ್ರಿ ಆಗುವ ಅವಕಾಶ ದೊರೆತಿಲ್ಲ. ಕೆಲವು ಬಾರಿ ಅವಕಾಶಗಳು ಲಭಿಸಿದರೂ ರಾಜಕೀಯ ಪಿತೂರಿಗಳಿಂದ ಕೈತಪ್ಪಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.  

ADVERTISEMENT

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿವೆ. ಸಾಮಾಜಿಕ ನ್ಯಾಯ ಮತ್ತು ದಲಿತರ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರು ದಲಿತರೊಬ್ಬರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಮುಂದಾಗಬೇಕು. ಇದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಲಿಷ್ಠ ನೆಲೆ ಒದಗಿಸಲಿದೆ’ ಎಂದು ತಿಳಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸುವರ್ಣಾ, ಸಂಘಟನಾ ಕಾರ್ಯದರ್ಶಿ ಆರ್.ಎಂ. ನಾರಾಯಣಸ್ವಾಮಿ, ಖಜಾಂಚಿ ಎಚ್. ಗಿರಿಜಾ ಸುದ್ದಿಗೋಷ್ಠಿಯಲ್ಲಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.