ADVERTISEMENT

ಬೆಂಗಳೂರು | ‘ದಲಿತರು, ಅಲ್ಪಸಂಖ್ಯಾತರು ಒಂದಾದರೆ ಶಕ್ತಿ’

ಶಾಹು ಮಹಾರಾಜರ 151ನೇ ಜನ್ಮದಿನಾಚರಣೆಯಲ್ಲಿ ಸಿ.ಎಂ. ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 0:26 IST
Last Updated 27 ಜುಲೈ 2025, 0:26 IST
ಶಾಹು ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಿ.ಎಂ. ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್‌, ಎಂ. ಗೋಪಿನಾಥ್‌, ಮಾರಸಂದ್ರ ಮುನಿಯಪ್ಪ, ಆರ್ ಮೋಹನ್ ರಾಜ್ , ಸ್ವಪ್ನ ಮೋಹನ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಶಾಹು ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಿ.ಎಂ. ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್‌, ಎಂ. ಗೋಪಿನಾಥ್‌, ಮಾರಸಂದ್ರ ಮುನಿಯಪ್ಪ, ಆರ್ ಮೋಹನ್ ರಾಜ್ , ಸ್ವಪ್ನ ಮೋಹನ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದಲಿತರು, ಅಲ್ಪಸಂಖ್ಯಾತರು ಒಗ್ಗಟ್ಟಾಗದಿದ್ದರೆ ರಾಜಕೀಯ ಶಕ್ತಿ ಪಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾತ ಸಮುದಾಯದವರು ಮುಖ್ಯಮಂತ್ರಿಯಾಗಿ ಆರು ತಿಂಗಳು ಆಡಳಿತ ನಡೆಸಿದರೂ ನಾಡಿನಲ್ಲಿರುವ ಬಸವ ತತ್ವ ಸಾರ್ಥಕವಾಗಲಿದೆ’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.

ಛತ್ರಪತಿ ಶಾಹು ಮಹಾರಾಜರ 151ನೇ ಜನ್ಮದಿನದ ಪ್ರಯುಕ್ತ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ–ಭೀಮವಾದ ಶನಿವಾರ ಏರ್ಪಡಿಸಿದ್ದ ‘ಪ್ರಸ್ತುತ ಮೀಸಲಾತಿ ಮತ್ತು ಇಂದಿನ ಸವಾಲುಗಳು’ ಕುರಿತ ಚರ್ಚೆ ಹಾಗೂ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಜಾತಿ ಸಮೀಕ್ಷೆಯನ್ನು ತಿರಸ್ಕರಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ತನ್ನನ್ನು ನಂಬಿದ ಸಮುದಾಯದ ಮಾನ ಕಳೆದಿದ್ದಾರೆ. ಸಿದ್ದರಾಮಯ್ಯರಿಗೆ ಸ್ಥಾನ ಮುಖ್ಯವೇ ಹೊರತು ಮಾನವಲ್ಲ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿ, ಕಾಂಗ್ರೆಸ್‌ನವರಿಗೆ ಓಟ್‌ ಬ್ಯಾಂಕ್‌ ಆಗಿ ನಾವು ಬೇಕಾಗಿದೆಯೇ ಹೊರತು ರಾಜಕೀಯ ಶಕ್ತಿಯಾಗಿ ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಪರ್ಯಾಯ ರಾಜಕಾರಣ ಮಾಡಬೇಕು. ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದ ಮತದಾನದ ಹಕ್ಕನ್ನು ಬಳಸಿಕೊಂಡು ವಿಧಾನಸೌಧ ಪ್ರವೇಶಿಸಬೇಕು’ ಎಂದು ಪ್ರತಿಪಾದಿಸಿದರು.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿದರು. ಮುಖಂಡರಾದ ಎಂ. ಗೋಪಿನಾಥ್, ಆರ್. ಮೋಹನ್ ರಾಜ್, ಆರ್.ಎಂ.ಎನ್. ರಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.