
ಬೆಂಗಳೂರು: ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಆಶಯ ಹೋಗಿದ್ದು, ಒಡಕಿನ ಸಾಗರಕ್ಕೆ ಸಾವಿರಾರು ಬಣಗಳು ಎಂಬಂತಾಗಿದೆ. ಇಂದು ಇಲ್ಲವಾಗಿರುವ ದಲಿತ ಚಳವಳಿಯನ್ನು ಪುನರುಜ್ಜೀವನಗೊಳಿಸಬೇಕಿದೆ’ ಎಂದು ಹೋರಾಟಗಾರ, ಕವಿ ಎಚ್. ಗೋವಿಂದಯ್ಯ ಹೇಳಿದರು.
‘ದಲಿತ ಸಾಹಿತ್ಯ ಮತ್ತು ಚಳವಳಿ–50’ ಕುರಿತು ಮೂರು ದಿನಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ದಿಕ್ಸೂಚಿ ಭಾಷಣ ಮಾಡಿದರು.
ಕುವೆಂಪು ಅವರ ಸಾಹಿತ್ಯ ವೈಚಾರಿಕತೆ, ಡಿ.ಆರ್. ನಾಗರಾಜ್ ಅವರ ಸಾಂಸ್ಕೃತಿಕ ವೈಚಾರಿಕತೆ, ರಾಮ ಮನೋಹರ ಲೋಹಿಯಾ ಅವರ ಸಾಂಸ್ಕೃತಿಕ ತಾತ್ವಿಕತೆಯನ್ನು ಇಟ್ಟುಕೊಂಡು ದಲಿತ ಚಳವಳಿಯ ಸುವರ್ಣ ಕಾಲದ ಸಾಂಸ್ಕೃತಿಕ ತಾತ್ವಿಕತೆಯನ್ನು ಪುನರ್‌ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಜಾತಿಯ ರೋಗಿಷ್ಠ ಭಾರತವನ್ನು ಗುಣಮುಖಗೊಳಿಸಬಲ್ಲ ಎಲ್ಲ ರೀತಿಯ ಅವಮಾನಿತರ, ಶೋಷಿತರ ಬಿಡುಗಡೆಯ ದಾರಿಯೊಂದು ಕನ್ನಡದ ಮಣ್ಣಲ್ಲಿ ಅಸ್ಪೃಷ್ಯ ದಲಿತರ ನೇತೃತ್ವದಲ್ಲಿ ಆರಂಭವಾಗಿತ್ತು. 1980ರ ದಶಕದಲ್ಲಿ ಸಾಹಿತ್ಯ ಮತ್ತು ಚಳವಳಿ ಬೇರೆ ಬೇರೆಯಾಗದೆ ಒಂದೇ ಆಗಿ ನಡೆದಿರುವುದೇ ಅದಕ್ಕೆ ಕಾರಣವಾಗಿತ್ತು. ಆದರೆ, ಅದು ಆಂಶಿಕವಾಗಿ ನಡೆಯಿತು. 1985ಲ್ಲಿ ಒಡಕಿನ ಬೀಜ ಅಂಕುರವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಚಳವಳಿಯ ಕೆಲವು ನಾಯಕರು ಜನ ಸಾಮಾನ್ಯರ ದೇಸಿ ಸಾಂಸ್ಕೃತಿಕ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳದ ಅವಿವೇಕದಿಂದಾಗಿ ಚಳವಳಿ ಅವನತಿಯತ್ತ ಸಾಗಲು ಶುರುವಾಯಿತು. ಈ ಸಾಂಸ್ಕೃತಿಕ ಅವಿವೇಕಕ್ಕೆ ಅಸ್ಪೃಶ್ಯರ ಎಡ, ಬಲ ಜಾತಿಯ ಆಯಾಮವೂ ಪ್ರಾಪ್ತವಾಗಿದ್ದರಿಂದ ಪತನವು ವೇಗ ಪಡೆದುಕೊಂಡಿತ್ತು ಎಂದು ವಿಶ್ಲೇಷಿಸಿದರು.
ನವಬ್ರಾಹ್ಮಣವಾದದ ವಿಷದ ಜಾಲವು ಕಟ್ಟ ಕಡೆಯ ಅಸ್ಪೃಶ್ಯ ಸಮುದಾಯಗಳ ನಡುವೆಯೂ ಇಳಿಯುತ್ತಿದೆ. ಇದು ಬ್ರಾಹ್ಮಣಶಾಹಿಗಳಿಗೆ ಸಂತೋಷವನ್ನು ಉಂಟು ಮಾಡಿದೆ. ವಿಷಕಾರಿ ಜಾಲದಿಂದ ಸಮುದಾಯಗಳನ್ನು ಹೊರತರಬೇಕಿದೆ. ಅದಕ್ಕಾಗಿ ದಲಿತ ಚಳವಳಿಯನ್ನು ಪುನರುಜ್ಜೀವನಗೊಳ್ಳಬೇಕಿದೆ. ಅದಕ್ಕೆ ಈ ಅಧ್ಯಯನ ಶಿಬಿರ ನಾಂದಿಯಾಗಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಉದ್ಘಾಟಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಚಂದ್ರಕಾಂತ್ ಕರಿಗಾರ್, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಿ. ಡೊಮಿನಿಕ್, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್., ಸಹ ಸಂಚಾಲಕರಾದ ಸುಬ್ಬು ಹೊಲೆಯಾರ್, ದು. ಸರಸ್ವತಿ ಉಪಸ್ಥಿತರಿದ್ದರು.
‘ಕಥಾನಕ ಮೀರಬೇಕಿದೆ’
‘ದಲಿತ ಚಳವಳಿಯ ಬಗ್ಗೆ ಇಲ್ಲಿಯವರೆಗೆ ಬಂದಿರುವ ಕಥಾನಕಗಳು ತಪ್ಪು ಸಂದೇಶವನ್ನು ಬರಹಗಳು ತಪ್ಪು ಮಾಹಿತಿಗಳನ್ನು ಹೊಂದಿವೆ. ಈ ದೋಷಗಳನ್ನು ಸರಿಪಡಿಸಲು ಒಂದು ವಿಶ್ವವಿದ್ಯಾಲಯವೇ ಕೆಲಸ ಮಾಡಬೇಕಾಗಬಹುದು’ ಎಂದು ಶಿಬಿರದ ಸಂಚಾಲಕರಾದ ಕವಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು. ‘ತಪ್ಪು ಕಥಾನಕಗಳನ್ನು ಮೀರಿ ಸತ್ಯ ತಿಳಿದರೆ ಮಾತ್ರ ದಲಿತ ಚಳವಳಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯ. ಕಾಣೆಯಾಗಿರುವ ಸಣ್ಣ ಸಣ್ಣ ಜರಿಗಳನ್ನು ಮತ್ತೆ ಕಟ್ಟಿಕೊಡುವ ಮೂಲಕ ಈ ಕೆಲಸ ಮಾಡಬೇಕು. ಜೀವಂತ ಚಳವಳಿಯೊಂದು ಅಕಾಡೆಮಿಕ್ ಚರ್ಚೆಯೊಳಗೆ ಬರುತ್ತಿರುವುದೇ ಅದು ಸಾಯುತ್ತಿರುವ ಲಕ್ಷಣ. ಅದು ಮತ್ತೆ ಜನ ಚಳವಳಿಯಾಗಿಯೇ ಬೆಳೆಯುವಂತೆ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.