
ಬೆಂಗಳೂರು: ದೇವದಾಸಿಯರ ಮರು ವಿವಾಹದ ಪ್ರೋತ್ಸಾಹ ಧನ ಹೆಚ್ಚಳ ಮತ್ತು ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ದಲಿತ ಹಕ್ಕುಗಳ ಸಮಿತಿಯು (ಡಿಎಚ್‌ಎಸ್) ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಬೆಳಿಗ್ಗೆಯಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ.
‘ಈಗ ನಡೆಸುತ್ತಿರುವ ಗಣತಿಯಲ್ಲಿ ಮಾಜಿ ದೇವದಾಸಿಯರನ್ನು ಪರಿಗಣಿಸಬೇಕು. ಪುನರ್ವಸತಿ ಕಲ್ಪಿಸಬೇಕು. ಪಿಂಚಣಿ ಒದಗಿಸಬೇಕು, ಜಮೀನು ಒದಗಿಸಬೇಕು. ವಸತಿ ಮತ್ತು ಸಾಲ ಸೌಲಭ್ಯಗಳಲ್ಲಿ ಮೀಸಲಾತಿ ಒದಗಿಸಬೇಕು. ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂಬರುವ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ಆರ್ಥಿಕ ಪರಾವಲಂಬಿಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಮಹಿಳೆಯರು, ಮಸಣ ಕಾರ್ಮಿಕರು, ದೇವದಾಸಿಯರು ಮತ್ತು ಒಂಟಿ ಮಹಿಳೆಯರನ್ನು ಸಾಮಾಜಿಕ ದೌರ್ಜನ್ಯ, ಜಾತಿ ತಾರತಮ್ಯ, ಅತ್ಯಾಚಾರ, ಹಲ್ಲೆ ಹಾಗೂ ಬಹಿಷ್ಕಾರಗಳಿಂದ ಮುಕ್ತಗೊಳಿಸಬೇಕು. ಸ್ವಾವಲಂಬಿ ಜೀವನ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ನೆರವಾಗಬೇಕು’ ಎಂದು ಆಗ್ರಹಿಸಿದರು.
ಡಿಎಚ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವಾಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಮಾಳಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.