ADVERTISEMENT

ಮನಸೆಳೆದ ನೃತ್ಯ ರೂಪಕಗಳು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 18:57 IST
Last Updated 30 ಜುಲೈ 2019, 18:57 IST
ನೃತ್ಯ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರ ತಂಡ–ಪ್ರಜಾವಾಣಿ ಚಿತ್ರ
ನೃತ್ಯ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರ ತಂಡ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜ್ಯುಕೇಶನ್‌’ (ಡಿಎಚ್‌ಐಇ) ವತಿಯಿಂದ ಕಬ್ಬನ್‌ ಉದ್ಯಾನದ ಬಾಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನೃತ್ಯ ಸ್ಪರ್ಧೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿತು. ಸಾಂಪ್ರದಾಯಿಕ ಹಾಗೂ ಆಧುನಿಕ ನೃತ್ಯ ಶೈಲಿಯನ್ನು ಪ್ರಸ್ತುತಪಡಿಸುವ ಮೂಲಕ ವಿದ್ಯಾರ್ಥಿಗಳು ಸಭಿಕರನ್ನು ನಿಬ್ಬೆರಗಾಗಿಸಿದರು.

ಕೆಎಂಎಫ್ ಹಾಗೂ ಎಂಎಸ್‌ಐಎಲ್ ಸಹಯೋಗದಲ್ಲಿ ಆಯೋಜಿಸಿದ್ದ ಈ ಅಂತರ ಶಾಲಾ ನೃತ್ಯ ಪ್ರದರ್ಶನವು ಮಂಗಳವಾರ ವರ್ಣರಂಜಿತವಾಗಿ ಸಂಪನ್ನಗೊಂಡಿತು.

‘ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಮಾಜದ ಸಮಕಾಲೀನ ವಿಷಯವನ್ನು ಆಯ್ದುಕೊಂಡಿದ್ದು ವಿಶೇಷವಾಗಿತ್ತು. ಕಿರಿಯರು ಮತ್ತು ಹಿರಿಯರ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಳ್ಳಲು ತೀವ್ರ ಪೈಪೋಟಿ ಏರ್ಪಟ್ಟಿತ್ತು.

ADVERTISEMENT

ಕಿರಿಯರ ವಿಭಾಗದಲ್ಲಿ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆ ಹಾಗೂ ಹಿರಿಯರ ವಿಭಾಗದಲ್ಲಿ ಗಂಗಾ ಇಂಟರ್‌ನ್ಯಾಷನಲ್ ಶಾಲೆ ಪ್ರಥಮ ಸ್ಥಾನ ಪಡೆಯಿತು.

ಎಚ್‌ಬಿಆರ್‌ ಬಡಾವಣೆಯ ಎಸ್‌ಜೆಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ‘ತಂತ್ರಜ್ಞಾನ ನಿಮ್ಮನ್ನು ನಿಯಂತ್ರಣಕ್ಕೆ ತರುವ ಮುನ್ನ ತಂತ್ರಜ್ಞಾನದ ಅತಿಯಾದ ಬಳಕೆಯನ್ನು ನಿಯಂತ್ರಿಸಿ’ ಎಂಬ ಸಂದೇಶ ಸಾರುವ ನೃತ್ಯ ಪ್ರದರ್ಶಿಸಿದರು. ಮೊಬೈಲ್‌ ಫೋನ್‌ನಿಂದಾಗಿ ಪಾಲಕರು ಮಕ್ಕಳೆಡೆಗೆ ಗಮನ ಹರಿಸುತ್ತಿಲ್ಲ. ಒಡಹುಟ್ಟಿದವರು ಕೂಡ ವಿಡಿಯೊ ಗೇಮ್ ಹಾಗೂ ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ನಿರತರಾಗುತ್ತಿದ್ದಾರೆ. ದುರಂತ ಸಂಭವಿಸಾದಾಗ ಮಾತ್ರ ತಪ್ಪಿನ ಅರಿವಾಗುತ್ತದೆ ಎಂಬ ಸಂದೇಶವುಳ್ಳ ನೃತ್ಯ ನೆರೆದಿದ್ದವರನ್ನು ಜಾಗೃತಗೊಳಿಸಿತು.

ಕೆನ್ಸ್ರಿ ಶಾಲೆಯ ಐವರು ವಿದ್ಯಾರ್ಥಿನಿಯರು ಹಿರಣ್ಯಕಶಿಪು ಸಂಹಾರದ ಭರತನಾಟ್ಯವನ್ನು ಪ್ರದರ್ಶಿಸಿದರು.ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಶಿವನ ರುದ್ರಾವತಾರವನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು. ಆದಿತ್ಯ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಮಹಿಷಾಸುರಮರ್ದಿನಿ, ಕೆಎಂವಿ ರೆಡ್‌ ಹಿಲ್ಸ್ ಶಾಲೆಯ ವಿದ್ಯಾರ್ಥಿನಿಯರು ಕೃಷ್ಣ ಲೀಲೆಯನ್ನು ಮಣಿಪುರಿ ನೃತ್ಯದ ಮೂಲಕ ಪ್ರದರ್ಶಿಸಿ ಗಮನಸೆಳೆದರು.

ತೀರ್ಪುಗಾರರಾಗಿದ್ದಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿ ಮಧುಲಿತಾ ಮೊಹಾಪಾತ್ರ ಮಾತನಾಡಿ, ‘ನೃತ್ಯದ ವಿವಿಧ ಪ್ರಕಾರವನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆ. ವಿದ್ಯಾರ್ಥಿಗಳ ಕೌಶಲ ಕೂಡಾ ಅನಾವರಣವಾಗಿದೆ. ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ನೀಡಿದಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲಿದ್ದಾರೆ’ ಎಂದು ತಿಳಿಸಿದರು.

ತೀರ್ಪುಗಾರರಾಗಿದ್ದ ತ್ಯಗಾರ್ತಿ ಸುಷ್ಮಿತಾ ಸುರೇಶ್, ‘ವಿದ್ಯಾರ್ಥಿಗಳ ನೃತ್ಯವನ್ನು ನೋಡಿದ ಬಳಿಕ ಶಾಲಾ ಜೀವನ ನೆನಪಿಗೆ ಬಂದಿತು. ವಿದ್ಯಾರ್ಥಿಗಳ ಪ್ರತಿಭೆಯನ್ನು ನೋಡಿ ಸಂತೋಷವಾಯಿತು. ಅಲ್ಪಾವಧಿಯಲ್ಲಿಯೇ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮತ್ತೊಬ್ಬ ತೀರ್ಪುಗಾರ್ತಿ, ನೃತ್ಯ ಕಲಾವಿದೆ ಬಿ.ಕೆ.ನಿಶಾ ‘ಒಂದೇ ವೇದಿಕೆಯಲ್ಲಿ ಹಲವು ಪ್ರತಿಭೆಗಳನ್ನು ಕಂಡು ಸಂತೋಷವಾಯಿತು. ಹೆಚ್ಚು ಅಭ್ಯಾಸ ಮಾಡಿದಲ್ಲಿ ನೃತ್ಯ ಕೌಶಲ ಹೆಚ್ಚಲಿದೆ’ ಎಂದು ತಿಳಿಸಿದರು. ನಿಶಾ ಅವರು ಬಾಲಕಿಯಾಗಿದ್ದಾಗಡಿಎಚ್‌ಐಇನಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.

ಸ್ಪರ್ಧಾ ವಿಜೇತರು
ಕಿರಿಯರ ವಿಭಾಗ
ಪ್ರಥಮ–ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆ
ದ್ವಿತೀಯ– ಕೆನ್ಸ್ರಿ ಶಾಲೆ
ತೃತೀಯ– ಕಾರ್ಮೆಲ್‍ಪ್ರೌಢಶಾಲೆ
ಸಮಾಧಾನ ಬಹುಮಾನ–ಸೆಂಟ್ ಕ್ಲಾರೆಟ್ ಶಾಲೆ

ಹಿರಿಯರ ವಿಭಾಗದ ಸ್ಪರ್ಧಾ ವಿಜೇತರು
ಪ್ರಥಮ–ಗಂಗಾ ಇಂಟರ್‌ನ್ಯಾಷನಲ್ ಶಾಲೆ
ದ್ವಿತೀಯ–ಕೆಎಂವಿ ರೆಡ್‌ ಹಿಲ್ಸ್ ಶಾಲೆ
ತೃತೀಯ–ನಾಗರೂರು ಬಿಜಿಎಸ್‌ ವರ್ಲ್ಡ್ ಶಾಲೆ
ಸಮಾಧಾನಕರ ಬಹುಮಾನ–ಸೇಂಟ್‌ ಮಾರ್ಕ್ಸ್ ಕಾನ್ವೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.