ADVERTISEMENT

ನಟ ದರ್ಶನ್‌ಗೆ ಹಾಸಿಗೆ, ದಿಂಬು: ಆದೇಶ ಕಾಯ್ದಿರಿಸಿದ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 15:27 IST
Last Updated 17 ಸೆಪ್ಟೆಂಬರ್ 2025, 15:27 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ‘ನ್ಯಾಯಾಲಯವು ಆದೇಶ ನೀಡಿದ್ದ ನಂತರವೂ ಆರೋಪಿ ದರ್ಶನ್‌ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಲೆದಿಂಬು ಹಾಗೂ ಹಾಸಿಗೆ ನೀಡಿಲ್ಲ’ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ 27ನೇ ಸಿಸಿಎಚ್‌ ನ್ಯಾಯಾಲಯವು ಆದೇಶ ಕಾಯ್ದಿರಿಸಿತು. ಸೆ.19ರಂದು(ಶುಕ್ರವಾರ) ಆದೇಶ ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದರು.

ವಿಚಾರಣೆ ಪ್ರಾರಂಭ ಆಗುತ್ತಿದ್ದಂತೆಯೇ ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತ ವರದಿಯನ್ನು ಪ್ರಾಸಿಕ್ಯೂಷನ್‌ ಪರ ವಕೀಲರು, ದರ್ಶನ್ ಪರ  ವಕೀಲರಿಗೆ ನೀಡಿದರು.

‘ನ್ಯಾಯಾಲಯವು ಆದೇಶ ಮಾಡಿದ್ದರೂ ಜೈಲಿನ ಅಧಿಕಾರಿಗಳು ಲಘುವಾಗಿ ಪರಿಗಣಿಸಿದ್ದಾರೆ. ಯಾವುದೇ ಸೌಲಭ್ಯವನ್ನೂ ನೀಡಿಲ್ಲ. ಕಂಬಳಿ, ಚಾಪೆ, ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ, ನಾವು ಮನವಿ ಮಾಡಿದ್ದ ಯಾವುದೇ ಸೌಲಭ್ಯವನ್ನೂ ಕೊಟ್ಟಿಲ್ಲ. ಕ್ವಾರಂಟೈನ್ ಸೆಲ್‌ನಲ್ಲೇ ಒಂದು ತಿಂಗಳಿಂದ ಇರಿಸಿದ್ದಾರೆ. ದರ್ಶನ್‌ ಅವರಿಗೆ ಹಿಂಸೆ ನೀಡಲಾಗುತ್ತಿದೆ’ ಎಂದು ದರ್ಶನ್ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದರು. 

ADVERTISEMENT

‘ಜೈಲಿನ ಕೈಪಿಡಿ ಹೊರತುಪಡಿಸಿ ಹೆಚ್ಚಿನ ಸೌಲಭ್ಯವನ್ನು ಕೊಟ್ಟಿಲ್ಲ. ಕಂಬಳಿ, ಹೊದಿಕೆ, ಲೋಟ, ತಟ್ಟೆ ನೀಡಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ 1 ಗಂಟೆ ವಾಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಕೈಪಿಡಿಯಂತೆಯೇ ಎಲ್ಲವನ್ನೂ ನೀಡಲಾಗುತ್ತಿದೆ. ಕ್ವಾರಂಟೈನ್‌ ಸೆಲ್‌ ವ್ಯವಸ್ಥೆ ಈಗ ಇಲ್ಲ’ ಎಂದು ಪ್ರಾಸಿ‌ಕ್ಯೂಷನ್‌ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು.

‘ಜೈಲಿನಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ (ಚರ್ಮದ ಅಲರ್ಜಿ). ಬೇರೆ ಯಾರಿಗೂ ಬೇಡ; ನನಗೆ ಮಾತ್ರ ವಿಷ ನೀಡಲಿ. ಈ ಸಂಬಂಧ ಕೋರ್ಟ್‌ ಆದೇಶ ನೀಡಲಿ...’ ಎಂದು ಸೆ.9ರಂದು ನಡೆದ ವಿಚಾರಣೆ ವೇಳೆ ದರ್ಶನ್ ಅವರು ನ್ಯಾಯಾಧೀಶರ ಎದುರು ಅಲವತ್ತುಕೊಂಡಿದ್ದರು.

ಜೈಲಿನ ಕೈಪಿಡಿಯಂತೆ ಸೌಲಭ್ಯ ಕಲ್ಪಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.