ADVERTISEMENT

ಜೈಲಿನ ಕೈಪಿಡಿ ಅನುಸಾರವೇ ದರ್ಶನ್‌ಗೆ ಸೌಲಭ್ಯ: ಕೋರ್ಟ್‌ಗೆ ಪರಿಶೀಲನಾ ವರದಿ

ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಪರಿಶೀಲನಾ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 0:24 IST
Last Updated 19 ಅಕ್ಟೋಬರ್ 2025, 0:24 IST
ದರ್ಶನ್
ದರ್ಶನ್   

ಬೆಂಗಳೂರು: ‘ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಹೊರತುಪಡಿಸಿ, ಜೈಲಿನ ಕೈಪಿಡಿ ಅನುಸಾರವೇ ಸೌಲಭ್ಯ ಕಲ್ಪಿಸ ಲಾಗುತ್ತಿದೆ’ ಎಂದು ಕಾನೂನು ಸೇವಾ ಪ್ರಾಧಿಕಾರದ ಬೆಂಗಳೂರು ಜಿಲ್ಲಾ ವಿಭಾಗದ ಸದಸ್ಯ ಕಾರ್ಯದರ್ಶಿ ಬಿ.ವರದರಾಜು ನೇತೃತ್ವದ ತಂಡವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣ ದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ಅವರಿಗೆ ಕನಿಷ್ಠ ಸೌಲಭ್ಯ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿ ಪರಿಶೀಲನೆ ನಡೆಸಿದ್ದ ತಂಡವು, ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಶುಕ್ರವಾರ ಪರಿಶೀಲನಾ ವರದಿ ಸಲ್ಲಿಸಿತು.

ನ್ಯಾಯಾಲಯದ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿ.ವರದರಾಜು ಮತ್ತು ತಂಡ ಅ.14ರಂದು ಭೇಟಿ ನೀಡಿ, ದರ್ಶನ್‌ ಅವರನ್ನು ಇರಿಸಲಾಗಿರುವ ಕ್ವಾರಂಟೈನ್‌ ಸೆಲ್‌ಗೆ ತೆರಳಿ, ನೀಡಿರುವ ಸೌಲಭ್ಯಗಳ ಬಗ್ಗೆ ತಪಾಸಣೆ ನಡೆಸಿತ್ತು.

ADVERTISEMENT

ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸಲಾಗಿದೆಯೇ ಎಂದು ಜೈಲು ಅಧಿಕಾರಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿತ್ತು. ಈ ವೇಳೆ ದರ್ಶನ್ ತಾವು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ವರದರಾಜು ಅವರ ಬಳಿ ಹೇಳಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.

ಈ ವೇಳೆ ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರ ಮಾಡುವಂತೆ ಪ್ರಾಧಿಕಾರದ ಅಧಿಕಾರಿ ಗಳಿಗೆ ದರ್ಶನ್‌ ಮನವಿ ಮಾಡಿದ್ದರು. ಬಂಧನವಾಗಿ ಎರಡು ತಿಂಗಳು ಕಳೆದರೂ ಕ್ವಾರಂಟೈನ್ ಸೆಲ್‌ನಲ್ಲಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ವರದರಾಜು ಅವರು, ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರೊಂದಿಗೆ ಸುಮಾರು ಎರಡು ತಾಸು ಸಮಾಲೋಚನೆ ನಡೆಸಿದ್ದರು. 

ವರದಿಯಲ್ಲಿರುವ ಇತರೆ ಅಂಶಗಳು?: ದರ್ಶನ್ ಅವರನ್ನು ಇರಿಸಲಾಗಿರುವ ಬ್ಯಾರಕ್​​ನಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿಯ ಎರಡು ಶೌಚಾಲಯಗಳಿವೆ.  ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬಿಗೆ ಅವಕಾಶ ಇಲ್ಲ. ನಿಯಮದಂತೆ ದರ್ಶನ್ ಅವರಿಗೆ ಒಂದು ತಾಸು ವಾಕಿಂಗ್ ಹಾಗೂ ಆಟವಾಡಲು ಅವಕಾಶ ನೀಡಬಹುದು. ಆದರೆ, ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರ ಬ್ಯಾರಕ್‌ನವರು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಂದ ಫೋಟೊ ತೆಗೆಯುತ್ತಾರೆಂದು ಜೈಲಾಧಿಕಾರಿ ಆಕ್ಷೇಪಿಸಿದ್ದಾರೆ. ಜೈಲಿನ ಶಿಸ್ತುಪಾಲನೆ ಹಾಗೂ ನಿರ್ವಹಣೆ ಹೊರತುಪಡಿಸಿ, ವಾಕಿಂಗ್ ಮಾಡಲು ಹಾಗೂ ಆಟಕ್ಕೆ ‌ಅವಕಾಶ ನೀಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕೈದಿಗಳಿಗೆ ಟಿ.ವಿ ನೋಡಲು ಅವಕಾಶ ನೀಡಬಹುದು. ಆದರೆ, ಪ್ರತಿ ಬ್ಯಾರಕ್​ಗೆ ಟಿ.ವಿ ನೀಡಬೇಕು ಎಂಬ ನಿಯಮ ಇಲ್ಲ. ಫೋನ್​ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆ ಎಂದು ದರ್ಶನ್ ಆಪಾದನೆಗೆ ಆರೋಪಿಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಕಾನೂನಿನಲ್ಲಿ ಅವಕಾಶ ಇದೆ. ಆರೋಪಿಗಳಿಗೆ ತಿಳಿಸಿ ಫೋನ್ ಕಾಲ್ ರೆಕಾರ್ಡ್‌ಗೆ ನಿಯಮದಲ್ಲಿ ಅವಕಾಶವಿದೆ. ಈ ಬಗ್ಗೆ ಜೈಲಧಿಕಾರಿಗಳು ನಿಯಮ ರೂಪಿಸಿದ್ದಾರೆ ಎಂಬುದಾಗಿ ವರದ ರಾಜು ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಮುಂದೂಡಿಕೆ 

ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಶನಿವಾರ ವಿಚಾರಣೆ ನಡೆಯಿತು. ವಿಡಿಯೊ ಕಾನ್ಫರೆನ್ಸ್‌ ಮೂಲಕ ದರ್ಶನ್ ಪವಿತ್ರಾ ಗೌಡ ಸೇರಿ 7 ಆರೋಪಿಗಳು ಹಾಜರಾದರೆ ದೀಪಕ್ ನಿಖಿಲ್ ನಾಯ್ಕ್ ಗೈರು ಹಾಜರಾದರು. ಉಳಿದ ಆರೋಪಿಗಳು ಖುದ್ದು ಹಾಜರಾದರು. 

ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನು ನೀಡದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಪ್ರಾಧಿಕಾರ ಸಲ್ಲಿಸಿರುವ ವರದಿಯ ಪ್ರತಿಯನ್ನು ತಮಗೂ ನೀಡುವಂತೆ ಆರೋಪಿಗಳ ಪರ ವಕೀಲರು ಕೋರಿದರು. ಅರ್ಜಿ ಸಲ್ಲಿಸಿ ವರದಿ ಪಡೆದುಕೊಳ್ಳುವಂತೆ ನ್ಯಾಯಾಧೀಶರು ವಕೀಲರಿಗೆ ಸೂಚಿಸಿದರು.

ವರದಿಯನ್ನು ಅಧ್ಯಯನ ಮಾಡಿ ವಾದಿಸಲು ಕಾಲಾವಕಾಶ ಬೇಕೆಂದು ಆರೋಪಿಗಳ ಪರ ವಕೀಲರು ಮನವಿ ಮಾಡಿದ್ದರಿಂದ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಲಾಯಿತು. 

‘ಕಾಲಿನ ಹಿಮ್ಮಡಿಯಲ್ಲಿ ಬಿರುಕು’

ಸೂರ್ಯನ ಬೆಳಕಿಲ್ಲದೇ ಕಾಲಿಗೆ ಫಂಗಸ್ (ಚರ್ಮ ರೋಗ) ಬಂದಿದೆ ಎಂದು ದರ್ಶನ್ ಹಿಂದಿನ ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದರು.

ಪರಿಶೀಲನೆ ವೇಳೆ ‘ಕಾಲಿನಲ್ಲಿ ಫಂಗಸ್ ಬಂದಿಲ್ಲ ಹಿಮ್ಮಡಿಯಲ್ಲಿ ಬಿರುಕಿದೆ. ಈ ಬಗ್ಗೆ ಚರ್ಮರೋಗ ತಜ್ಞೆ ಜ್ಯೋತಿ ಬಾಯಿ ಪರಿಶೀಲಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್‌ಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್​ಗೆ ಫಿಸಿಯೋಥೆರಪಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.