ADVERTISEMENT

ಜೈಲಿನಲ್ಲಿ ಬ್ಯಾರಕ್‌ ಎದುರು ನಡೆದಾಡಲು ನಟ ದರ್ಶನ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 16:01 IST
Last Updated 11 ಸೆಪ್ಟೆಂಬರ್ 2025, 16:01 IST
ದರ್ಶನ್ 
ದರ್ಶನ್    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ, ನಟ ದರ್ಶನ್ ಅವರಿಗೆ ಕಾರಾಗೃಹದ ಬ್ಯಾರಕ್‌ನ ಎದುರು ನಡೆದಾಡಲು ಜೈಲಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ ಎಂದು ಗೊತ್ತಾಗಿದೆ.

ದರ್ಶನ್‌ ಅವರಿಗೆ ಬೆಳಿಗ್ಗೆ ಮತ್ತು ಸಂಜೆ 40 ನಿಮಿಷ ನಡೆದಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ನ್ಯಾಯಾಲಯದ ಸೂಚನೆಯಂತೆ ನಡೆದಾಡಲು ಅವಕಾಶ ಮಾಡಿಕೊಡಲಾಗಿದೆ. ದರ್ಶನ್‍ ನಡೆದಾಡುವಾಗ ಜೈಲಿನ ಇತರೆ ವಿಚಾರಣಾಧೀನ ಕೈದಿಗಳು ಆ ಸ್ಥಳಕ್ಕೆ ಬರುವಂತಿಲ್ಲ. ದರ್ಶನ್‍ ಅವರು ಬ್ಯಾರಕ್‌ ಒಳಗೆ ಹೋದ ಮೇಲಷ್ಟೇ ಇತರೆ ಕೈದಿಗಳು ಆ ಸ್ಥಳದಲ್ಲಿ ನಡೆದಾಡಬಹುದಾಗಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ADVERTISEMENT

ದರ್ಶನ್‌ ಅವರನ್ನು ಜೈಲಿನಲ್ಲಿ ಇರಿಸಲಾಗಿರುವ ಬ್ಯಾರಕ್‌ ಎದುರು ನಡೆಯುವ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಅವರ ಬ್ಯಾರಕ್‍ನ ಬಳಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ಸೂರ್ಯನ ಬೆಳಕು ಮೈಮೇಲೆ ಬಿದ್ದು ತಿಂಗಳು ಕಳೆದಿದೆ. ಕೈಯಲ್ಲಿ ಫಂಗಸ್ (ಚರ್ಮ ರೋಗ) ಕಾಣಿಸಿಕೊಂಡಿದೆ ಎಂದು ವಿಚಾರಣೆ ವೇಳೆ ದರ್ಶನ್‌ ಅವರು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದರು. ಕಾರಾಗೃಹದ ವೈದ್ಯರಿಂದ ದರ್ಶನ್‌ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.