ADVERTISEMENT

ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ: ವಿಚಾರಣೆಗೆ ಗೃಹ ಇಲಾಖೆ ಅನುಮತಿ

ಜೈಲು ಸಿಬ್ಬಂದಿ, ಅಧಿಕಾರಿಗಳ ವಿಚಾರಣೆ * ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 15:26 IST
Last Updated 9 ಏಪ್ರಿಲ್ 2025, 15:26 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವೇಳೆ ಅವರಿಗೆ ವಿಶೇಷ ಆತಿಥ್ಯ ಕಲ್ಪಿಸಿದ್ದ ಆರೋಪ ಹೊತ್ತಿರುವ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳ ವಿಚಾರಣೆಗೆ ಗೃಹ ಇಲಾಖೆ ಅನುಮತಿ ನೀಡಿದೆ.

‘ಘಟನೆ ನಡೆದು ಏಳು ತಿಂಗಳ ಬಳಿಕ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿದೆ. ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ಆರಂಭವಾಗಿದೆ’ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಮತ್ತು ಸಹಚರರು ಹಾಗೂ ರೌಡಿ ಶೀಟರ್‌ಗಳಿಗೆ ವಿಶೇಷ ಆತಿಥ್ಯ ನೀಡಿದ ಆರೋಪದ ಅಡಿ ಹಿಂದಿನ ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕ ಮತ್ತು ಸಿಬ್ಬಂದಿ ಸೇರಿ ಒಂಬತ್ತು ಮಂದಿಯನ್ನು ಕಳೆದ ಆಗಸ್ಟ್ 26ರಂದು ಅಮಾನತು ಮಾಡಲಾಗಿತ್ತು. ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಮೂರು ಎಫ್ಐಆರ್‌ಗಳು ದಾಖಲಾಗಿದ್ದವು.

ADVERTISEMENT

‘ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಜೈಲಿನ‌ ಅಧಿಕಾರಿ, ಸಿಬ್ಬಂದಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ದರ್ಶನ್‌, ವಿಲ್ಸನ್‌ ಗಾರ್ಡನ್‌ ನಾಗನ ಕೈಗೆ ಸಿಗರೇಟ್‌ ಸಿಕ್ಕಿದ್ದು ಹೇಗೆ? ದರ್ಶನ್‌ಗೆ ಮೊಬೈಲ್‌ ಕೊಟ್ಟವರು ಯಾರು? ಬಾಕ್ಸ್‌ವೊಂದನ್ನು ಕೊಂಡೊಯ್ದವರು ಯಾರು? ಬಾಕ್ಸ್‌ನಲ್ಲಿ ಏನಿತ್ತು ಎಂಬ ಪ್ರಶ್ನೆ ಕೇಳಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ವಿಶೇಷ ಆತಿಥ್ಯ ಕಲ್ಪಿಸಿದ್ದಕ್ಕೆ ಕೆಲವು ಸಾಕ್ಷ್ಯಗಳು ಲಭಿಸಿದ್ದು, ಸಿಬ್ಬಂದಿಯ ಎದುರು ಸಾಕ್ಷ್ಯಗಳನ್ನು ತೋರಿಸಿ ಪ್ರಶ್ನೆ ಕೇಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.