ADVERTISEMENT

ಬೆಂಗಳೂರು: ದರ್ಶನ್‌ ಪತ್ನಿ ಫ್ಲ್ಯಾಟ್‌ನಲ್ಲಿ ₹3 ಲಕ್ಷ ನಗದು ಕಳವು

ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 15:08 IST
Last Updated 13 ಸೆಪ್ಟೆಂಬರ್ 2025, 15:08 IST
ವಿಜಯಲಕ್ಷ್ಮಿ 
ವಿಜಯಲಕ್ಷ್ಮಿ    

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ಪ್ರೆಸ್ಟೀಜ್‌ ಸೌತ್‌ ರಿಡ್ಜ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಚನ್ನಮ್ಮನಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್ ನೀಡಿರುವ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

₹3 ಲಕ್ಷ ನಗದು ಕಳ್ಳತನವಾಗಿದೆ ಎಂದು ದೂರು ನೀಡಲಾಗಿದೆ. ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲಸದವರನ್ನು ಕರೆಸಿ, ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

ADVERTISEMENT

‘ಹತ್ತು ವರ್ಷಗಳಿಂದ ವಿಜಯಲಕ್ಷ್ಮಿ ಅವರ ಮನೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಸೆ.4ರಂದು ವಿಜಯಲಕ್ಷ್ಮಿ ಅವರು ಕರೆದು ಬೆಡ್‌ ರೂಮ್‌ನ ಕಾಟನ್‌ ಬಾಕ್ಸ್‌ನಲ್ಲಿ ಹಣವಿದೆ. ಅದನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಅವರು ಹೇಳಿದಷ್ಟು ಹಣವನ್ನು ತೆಗೆದುಕೊಂಡು ಉಳಿದ ಹಣವನ್ನೇ ಅಲ್ಲೇ ಬಿಟ್ಟು ಬಂದಿದ್ದೆ. ಆ ಹಣವನ್ನು ತೆಗೆದುಕೊಂಡು ವಿಜಯಲಕ್ಷ್ಮಿ ಅವರು ಮೈಸೂರಿಗೆ ತೆರಳಿದ್ದರು. ಮನೆಯ ಬಾಗಿಲಿಗೆ ಬೀಗ ಹಾಕಿ ಕೀ ನನಗೆ ಕೊಟ್ಟು ಹೋಗಿದ್ದರು. ವಿಜಯಲಕ್ಷ್ಮಿ ಅವರ ತಾಯಿಗೆ ಮನೆ ಕೀ ಕೊಟ್ಟು ನಾನೂ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ಸೆ.5ರಂದು ನಾನೂ ಮೈಸೂರಿಗೆ ತೆರಳಿ, ಸೆ.7ರಂದು ವಿಜಯಲಕ್ಷ್ಮಿ ಅವರನ್ನು ಕರೆದುಕೊಂಡು ಬಂದು ಹೊಸಕೆರೆಹಳ್ಳಿಯಲ್ಲಿ ಇರುವ ಅವರ ಫ್ಲ್ಯಾಟ್‌ಗೆ ಬಿಟ್ಟು ನನ್ನ ಮನೆಗೆ ತೆರಳಿದ್ದೆ. ಮರು ದಿನ ವಿಜಯಲಕ್ಷ್ಮಿ ಅವರು ಕರೆ ಮಾಡಿ ರೂಮ್‌ನಲ್ಲಿದ್ದ ಹಣ ಕಾಣಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದರು’ ಎಂದು ನಾಗರಾಜ್‌ ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲ ಕಡೆಯೂ ಹುಡುಕಾಟ: ‘ಮನೆಯ ಎಲ್ಲ ಕಡೆ ಹುಡುಕಾಟ ನಡೆಸಿದರೂ ಹಣ ಸಿಕ್ಕಿಲ್ಲ. ಮನೆ ಕೆಲಸದವರನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ₹3 ಲಕ್ಷ ಕಳ್ಳತನವಾಗಿದ್ದು ಮನೆ ಕೆಲಸದವರ ಮೇಲೆ ಅನುಮಾನವಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.